ಶಿವಮೊಗ್ಗ ಜಿಲ್ಲಾದ್ಯಂತ ಶೇ.34 ರಷ್ಟು ಮಳೆ ಕೊರತೆ
ಶಿವಮೊಗ್ಗ, ಆ. 5: ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಸರ್ವಾನುಮತದ ನಿರ್ಣಯ ಅಂಗೀಕರಿಸಿ, ರಾಜ್ಯ ಸರಕಾರಕ್ಕೆ ಸಲ್ಲಿಸುವ ಮಹತ್ವದ ನಿರ್ಧಾರವನ್ನು ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಅತ್ಯಧಿಕ ಮಳೆಯಾಗುವ ಜೂನ್ ಮತ್ತು ಜುಲೈ ತಿಂಗಳಲ್ಲಿಯೇ ಕಡಿಮೆ ಮಳೆಯಾಗಿದೆ. ಇದರಿಂದ ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತದ ನಾಟಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಕಾಂಗ್ರೆಸ್ ಸದಸ್ಯ ಕಲಗೋಡು ರತ್ನಾಕರ ರವರು ವಿಷಯ ಪ್ರಸ್ತಾಪಿಸಿ ಮಾತನಾಡಿದರು. ಕೃಷಿ ಇಲಾಖೆ ನೀಡಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಶೇ. 34 ರಷ್ಟು ಮಳೆ ಕೊರತೆಯಾಗಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಯ ಮಳೆಯೂ ಆಗಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆ ಉದ್ಭವವಾಗುವ ಸಾಧ್ಯತೆಯಿದೆ. ಈಗಾಗಲೇ ಸೊರಬ ತಾಲೂಕನ್ನು ಬರ ಪೀಡಿತವೆಂದು ಘೋಷಿಸಲಾಗಿದೆ. ಉಳಿದ ಆರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸುವಂತೆ ಜಿಪಂ ನಿಂದ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಸಲ್ಲಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಜೆಡಿಎಸ್ ಸಸ್ಯ ಜೆ.ಪಿ. ಯೋಗೀಶ ಸೇರಿದಂತೆ ಇತರ ಸದಸ್ಯರು ಧ್ವನಿಗೂಡಿಸಿ ಮಾತನಾಡಿದರು. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್‌ರವರ ಸೂಚನೆಯ ಮೇರೆಗೆ ಕೃಷಿ ಇಲಾಖೆಯ ಉಪ ನಿರ್ದೇಶಕ ಮಧುಸೂಧನ್‌ರವರು ಮಾತನಾಡಿದರು. ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 2, 237 ಮಿ. ಮೀ. ಮಳೆ ನಿರೀಕ್ಷಿಸಲಾಗಿದ್ದು, ಜೂನ್ ಮತ್ತು ಜುಲೈ ತಿಂಗಳಲ್ಲಿ 1, 400 ಮಿ.ಮೀ. ಮಳೆಯಾಗುವ ಬಗ್ಗೆ ಅಂದಾಜಿಸಲಾಗಿತ್ತು. ಆದರೆ ಜೂನ್-ಜುಲೈ ತಿಂಗಳಲ್ಲಿ ಕೇವಲ 925 ಮಿ.ಮೀ. ಮಳೆಯಾಗಿದೆ. ಜೂನ್ ಮಾಹೆಯಲ್ಲಿ ಶೇ. 11 ಹಾಗೂ ಜುಲೈನಲ್ಲಿ ಶೇ. 45 ರಷ್ಟು ಮಳೆಯಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಶೇ. 34 ರಷ್ಟು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಈ ಎರಡೂ ತಿಂಗಳ ಅವಧಿಯಲ್ಲಿ 1, 371 ಮಿ.ಮೀ. ವರ್ಷಧಾರೆಯಾಗಿತ್ತು ಎಂದು ಮಾಹಿತಿ ನೀಡಿದರು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,73,000 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ಮಳೆಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಇಲ್ಲಿಯ ವರೆಗೆ ಸುಮಾರು 1.6 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ವಿಶೇಷವಾಗಿ ಭತ್ತ ನಾಟಿ ಪ್ರಕ್ರಿಯೆ ವಿಳಂಬವಾಗಿದೆ. ಸುಮಾರು 1.8 ಲಕ್ಷ ಹೆಕ್ಟೆರ್ ಪ್ರದೇಶಗಳಲ್ಲಿ ಭತ್ತ ನಾಟಿಯಾಗಬೇಕಾಗಿತ್ತು ಎಂದು ಸಭೆಗೆ ಮಾಹಿತಿ ನೀಡಿದರು.
ಈ ವರೆಗೆ ಕೇವಲ ಸುಮಾರು 43 ಸಾವಿರ ಹೆಕ್ಟೇರ್‌ಗಳಲ್ಲಿ ಮಾತ್ರ ಭತ್ತ ನಾಟಿ ಕಾರ್ಯ ನಡೆದಿದೆ. ಉಳಿದಂತೆ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಒಟ್ಟು ಜಿಲ್ಲೆಯಲ್ಲಿ ಶೇ. 61 ರಷ್ಟು ಕೃಷಿ ಪ್ರಗತಿಯಾಗಿದೆ. ಕಳೆದೆರಡು ದಿನಗಳಿಂದ ಮಳೆ ಬೀಳಲಾರಂಭಿಸಿದ್ದು, ಉತ್ತಮ ಮಳೆಯಾದರೆ ಭತ್ತ ನಾಟಿ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ಸಮಗ್ರ ಮಾಹಿತಿ ನೀಡಿದರು. ನಿರ್ಣಯ ಅಂಗೀಕಾರ: ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ನೆಲೆಸಿರುವ ಪರಿಸ್ಥಿತಿಯ ಆಧಾರದ ಮೇಲೆ ಈಗಾಗಲೇ ಬರ ಪೀಡಿತ ಘೋಷಣೆ ಮಾಡಬೇಕಾಗಿತ್ತು. ಸಾಗರ ತಾಲೂಕಿನಲ್ಲಿ ಭಾರೀ ಪ್ರಮಾಣದ ತೋಟದ ಬೆಳೆಗೆ ಹಾನಿಯಾಗಿದೆ. ಇಲ್ಲಿಯವರೆಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಮಾತನಾಡಿ, ಜಿಲ್ಲೆಯ ಇತರ ಆರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಸರಕಾರಕ್ಕೆ ಜಿಪಂ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒ ಕೆ. ರಾಕೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ರೆತರಿಗೆ ಬೆಳೆ ಪರಿಹಾರ ನೀಡಿಲ್ಲ
: ಸಾಗರ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ತೋಟದ ಬೆಳೆಗೆ ಹಾನಿಯಾಗಿದೆ. ಈಗಾಗಲೇ ಅಧಿಕಾರಿಗಳು ಸಮೀಕ್ಷೆ ನಡೆಸಿ ಹಾನಿಯ ಅಂದಾಜು ಲೆಕ್ಕ ಹಾಕಿದ್ದಾರೆ. ಆದರೆ, ಈ ವರೆಗೂ ರೈತರಿಗೆ ಪರಿಹಾರ ಮಾತ್ರ ದೊರಕಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗುವಂತಾಗಿದೆ. ತಕ್ಷಣವೇ ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ ತಲುಪಿಸುವ ಕೆಲಸ ಮಾಡಬೇಕು. ಟ್ಯಾಂಕರ್ ಮೂಲಕ ಜಮೀನುಗಳಿಗೆ ನೀರು ಪೂರೈಸಿದವರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತ ಬಿಡುಗಡೆ ಗೊಳಿಸಬೇಕು ಎಂದು ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು. 134 ಕೋ.ರೂ. ವೆಚ್ಚದ ತುಂಗಾ ನಾಲೆ ಕಳಪೆ ಕಾಮಗಾರಿ: ಆರೋಪ
ತನಿಖೆಗೆ ಜಿಪಂ ಸಭೆಯಲ್ಲಿ ಒತ್ತಾಯ
ಶಿವಮೊಗ್ಗ, ಆ. 5: ಸುಮಾರು 134 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ತುಂಗಾ ನಾಲೆಯ ಆಧುನೀ ಕರಣ ಕಾಮಗಾರಿ ಕಳಪೆಯಾಗಿದ್ದು, ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿ ಪ್ರಸ್ತುತ ನಡೆದಿರು
ವ ಕಾಮಗಾರಿಯ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್‌ಸದಸ್ಯ ಕೆ.ಇ. ಕಾಂತೇಶ್ ಒತ್ತಾಯಿಸಿದ್ದಾರೆ. ಶುಕ್ರವಾರ ನಗರದ ಜಿಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ತುಂಗಾ ನಾಲೆಯ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ. ಇದರಿಂದ ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಕಾಲುವೆಯ ಏರಿ ಒಡೆದು ಹಲವು ಬಡಾವಣೆಗಳಿಗೆ ನೀರು ನುಗ್ಗುವಂತಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ದೂರಿದರು. ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರನ್ನು ಯಾರೊಬ್ಬರು ನೋಡಿಲ್ಲ. ಈ ಗುತ್ತಿಗೆದಾರು ಮತ್ತೋರ್ವರಿಗೆ ಉಪ ಗುತ್ತಿಗೆ ನೀಡಿದ್ದಾರೆ. ಉಪ ಗುತ್ತಿಗೆ ಪಡೆದವರು ಮತ್ತೋರ್ವರಿಗೆ ಉಪ ಗುತ್ತಿಗೆ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ಅಸಮರ್ಪಕ ನಿರ್ವಹಣೆಯಿಂದ ಕಾಮಕಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ಹಲವು ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಜೊತೆಗೆ 7 ರಿಂದ 8 ಕೋಟಿ ರೂ. ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ತನಿಖೆ ನಡೆಸಬೇಕು ಎಂದು ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್‌ರವರನ್ನು ಆಗ್ರಹಿಸಿದರು. ಜೆಡಿಎಸ್ ಸದಸ್ಯ ಯೋಗೀಶ್ ಮಾತನಾಡಿ, ತುಂಗಾ ನಾಲೆಗಳ ಕಾಮಗಾರಿ ಮಾತ್ರವಲ್ಲ ಭದ್ರಾ ಡ್ಯಾಂನ ಕಾಮಗಾರಿಯೂ ಕಳಪೆಯಾಗಿ ನಡೆಯುತ್ತಿದೆ. ಕಾಮಗಾರಿ ನಡೆಸಲು ಅರ್ಹತೆಯಿಲ್ಲದ ಗುತ್ತಿಗೆದಾರನಿಗೆ ಕೆಲಸ ನೀಡಲಾಗಿದೆ ಎಂದು ದೂರಿದರು. ಬಳಿಕ ಮಾತನಾಡಿದ ಸದಸ್ಯ ಮಣಿಶೇಖರ, ಗೋಂಧಿ ನಾಲೆಯ ಕಾಮಗಾರಿಯೂ ಕಳಪೆಯಾಗಿ ನಡೆಯುತ್ತಿದೆ ಎಲ್ಲಾ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಶಿಕಾರಿಪುರ ಭಾಗದ ಸದಸ್ಯೆಯೊಬ್ಬರು ಮಾತನಾಡಿ, ಅಂಜನಾಪುರ ಜಲಾಶಯದ ಕಾಮಗಾರಿ ಕೂಡ ಕಳಪೆಯಾಗಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ತುಂಗಾ ನಾಲೆ ಸೇರಿದಂತೆ ಎಲ್ಲಾ ನಾಲೆಗಳ ಕಾಮಗಾರಿಗಳ ಬಗ್ಗೆ ಪ್ರತ್ಯೇಕವಾಗಿ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.







