ಆಗಸ್ಟ್ 14ರಂದು ಕೊಡಿಯಾಲ್‌ಬೈಲಿನಲ್ಲಿ ಆಟಿ ಉತ್ಸವ
ಸುಳ್ಯ, ಆ.5: ಗೌಡ ಯುವ ಸೇವಾ ಸಂಘದ ಸುಳ್ಯ ನಗರ ಸಮಿತಿ, ಮಹಿಳಾ ಹಾಗೂ ತರುಣ ಘಟಕಗಳ ವತಿಯಿಂದ ಆಟಿ ಉತ್ಸವ ಕಾರ್ಯಕ್ರಮ ಕೊಡಿಯಾಲ್‌ಬೈಲಿನ ಗೌಡ ಸಮುದಾಯ ಭವನದಲ್ಲಿ ಆಗಸ್ಟ್ 14ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಗೌಡ ಸಮಿತಿ ಅಧ್ಯಕ್ಷ ಸಂತೋಷ್ ಮಡ್ತಿಲ ಈ ಕುರಿತು ವಿವರ ನೀಡಿದರು. ನಗರಕ್ಕೆ ಒಳಪಟ್ಟಂತೆ 600 ಗೌಡ ಕುಟುಂಬಗಳಿದ್ದು, ಪರಸ್ಪರ ಪರಿಚಯ, ಸ್ನೇಹ ಬಾಂಧವ್ಯ ವೃದ್ಧಿ ಹಾಗೂ ಆಟಿ ಆಚರಣೆ ಮತ್ತು ಖಾದ್ಯಗಳ ತಯಾರಿ ಮತ್ತು ಸೇವನೆ ಕುರಿತು ಮುಂದಿನ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಆಟಿ ಉತ್ಸವವನ್ನು ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.
ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾನುಮತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಚಂದ್ರಮತಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಉದ್ಯಮಿ ಬಾಸ್ಕರ ಬಯಂಬು ಅತಿಥಿಯಾಗಿ ಬಾಗವಹಿಸಲಿದ್ದಾರೆ. ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ 60 ವರ್ಷದವರಿಗೆ ಆಕರ್ಷಕ ಸ್ಪರ್ಧೆಗಳು ನಡೆಯಲಿವೆ. ಆಟಿ ವಿಶೇಷ ಖಾದ್ಯಗಳ ಔತಣವಿದೆ ಎಂದವರು ಹೇಳಿದರು.
ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಾಜದ ಹಿರಿಯರಾದ ಡಿ.ಎಸ್.ಗೋಪಾಲ ದೇಂಗೋಡಿ, ನಿವೃತ್ತ ಶಿಕ್ಷಕಿ ಶಕುಂತಳಾ, ಮಾತೃ ಸಂಘದ ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಮೂಡಿಗೆರೆ ಕಸಾಪದ ಕಾರ್ಯದರ್ಶಿ ಎಚ್.ಪಿ.ರಘು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸಮಿತಿ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಸಂಘಟನಾ ಕಾರ್ಯದರ್ಶಿ ಗಂಗಾಧರ ಕುರುಂಜಿ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಿವಪ್ಪ, ಕಾರ್ಯದರ್ಶಿ ಲತಾ ಕುದ್ಪಾಜೆ, ಸಂಘಟನಾ ಕಾರ್ಯದರ್ಶಿ ಹರ್ಷಾ ಕರುಣಾಕರ, ತರುಣ ಘಟಕದ ಅಧ್ಯಕ್ಷ ಅವಿನಾಶ್ ಕುರುಂಜಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







