ರಾಜನಾಥ ಸಿಂಗ್‌ರ ಹೊಸ ಸಂಶೋಧನೆ!
ಮಾನ್ಯರೆ,
ಮೊನ್ನೆ ಬೆಂಗಳೂರಿನಲ್ಲಿ ರಾಜು ಕ್ಷತ್ರಿಯ ಸಂಘದವರು ಕೃಷ್ಣ ದೇವರಾಯನ 507 ಸ್ವರ್ಣ ಆಡಳಿತದ ನೆನಪಲ್ಲಿ ಆಚರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಕೃಷ್ಣ ದೇವರಾಯ ಕ್ಷತ್ರಿಯನಾಗಿದ್ದ ಎಂದು ಹೇಳಿದರು. ಆದರೆ ಅವರಿಗೆ ಇದನ್ನು ಯಾವ ಇತಿಹಾಸಕಾರ ಹೇಳಿದ್ದು? ರಾಯ ಹಿಂದುಳಿದ ತೆಲುಗು ಬಲಿಜ ಜಾತಿಯವನಾಗಿದ್ದ ಎಂದು ಹೆಚ್ಚಿನ ಇತಿಹಾಸಕಾರರು ಒಪ್ಪಿದ್ದಾರೆ. ಡಾ.ಎಂ. ಎಂ. ಕಲಬುರ್ಗಿಯವರಂತೂ ರಾಯನೊಬ್ಬ ಅಚ್ಚ ತೆಲುಗು ಪಕ್ಷಪಾತಿಯಾಗಿದ್ದ. ಅವನ ಮಾತೃಭಾಷೆ ತೆಲುಗು ಆಗಿತ್ತು ಎಂದೂ ಹೇಳಿದ್ದಾರೆ. ಯಾವನೇ ಒಬ್ಬ ಹಿಂದುಳಿದ ಜಾತಿಯವನು ರಾಜನಾದ ಕೂಡಲೇ ಅವನಿಗೆ ಕ್ಷತ್ರಿಯ ಜಾತಿಪಟ್ಟ ಕಟ್ಟಿ ಯಾವುದೋ ಗೋತ್ರ ಅಂಟಿಸುವ ಮೂರ್ಖ ಕೆಲಸ ಈಗಲಾದರೂ ನಿಲ್ಲಬೇಕು. ಇನ್ನು ಕೃಷ್ಣದೇವರಾಯನ ನೆನಪಿನ ಕಾರ್ಯಕ್ರಮದಲ್ಲಿ ರಾಜನಾಥ ಸಿಂಗರು ತಮ್ಮ ನೇತಾರ ಮೋದಿಯನ್ನು ಕೃಷ್ಣದೇವರಾಯನಿಗೆ ಹೋಲಿಸಿ ಕಾರ್ಯಕ್ರಮವಿಡೀ ಮೋದಿಯನ್ನು ಹೊಗಳುತ್ತಾ ಕೃಷ್ಣದೇವರಾಯನನ್ನು ಗೌಣವಾಗಿಸಿದ್ದು ಸರಿಯೇ?
ಛತ್ರಪತಿ ಶಿವಾಜಿ ಮುಸ್ಲಿಂ ವಿರೋಧಿಯಾಗಿರಲಿಲ್ಲ, ಆದರೂ ಅವನನ್ನು ಸಂಘ ಪರಿವಾರದವರು ಮುಸ್ಲಿಂ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೇ ಪ್ರಕಾರ ಕೃಷ್ಣ ದೇವರಾಯನೂ ಮುಸ್ಲಿಂ ವಿರೋಧಿಯಾಗಿರಲಿಲ್ಲ. ವಿಜಯನಗರದ ಸೈನ್ಯದಲ್ಲಿ ಸಾವಿರಾರು ಮುಸ್ಲಿಂ ಸೈನಿಕರು ಹಾಗೂ ಸೇನಾಪತಿಯೂ ಇದ್ದರು. ಆದರೆ ಸಂಘ ಪರಿವಾರದವರು ರಾಯನನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಕೆಲಸ ಮೆಲ್ಲಗೆ ಶುರುಮಾಡಿರುವಂತಿದೆ. ಗೋಹತ್ಯೆಯ ಬಗ್ಗೆ ವಿಚಿತ್ರ ನಿಯಮಗಳು ವಿಜಯನಗರದಲ್ಲಿ ಇರಲಿಲ್ಲ. ‘‘ಮೋದಿಯವರಂತೆ ಕೃಷ್ಣದೇವರಾಯನೂ ವಿದೇಶಿ ಬಂಡವಾಳ ಆಕರ್ಷಿಸುತ್ತಿದ್ದ ಹಾಗೂ ವಿದೇಶಿ ಹೂಡಿಕೆದಾರರು ವಿಜಯನಗರದಲ್ಲಿ ಬಂಡವಾಳ ಹೂಡಿದ್ದರು’’ ಎಂದು ಇನ್ನೊಂದು ಬಾಲಿಶ ಹೇಳಿಕೆ ರಾಜನಾಥ ಸಿಂಗ್ ಕೊಟ್ಟಿರುತ್ತಾರೆ. ವಿಜಯನಗರದ ಕಾಲದಲ್ಲಿ ಅನೇಕ ದೇಶಗಳ ರಾಯಭಾರಿಗಳು ಹಾಗೂ ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದುದು ನಿಜ. ಆದರೆ ಅವರು ಇಲ್ಲಿಯ ಸಾಮಾನುಗಳನ್ನು ಕೊಂಡು ಹೋಗಲು ಬರುತ್ತಿದ್ದರೇ ವಿನಹ ಅವರು ಇಲ್ಲಿಯೇ ನೆಲೆ ನಿಂತು ಬಂಡವಾಳ ಹೂಡಿ ಇಲ್ಲಿ ಏನಾದರೂ ಉತ್ಪಾದಿಸಿ ಅದನ್ನು ತಮ್ಮ ದೇಶಕ್ಕೆ ಕೊಂಡು ಹೋಗುತ್ತಿದ್ದ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಇದು ರಾಜನಾಥ ಸಿಂಗ್‌ರ ಹೊಸ ಸಂಶೋಧನೆ ಅಷ್ಟೇ.







