ರಾಜ್ಯಗಳ ಶೇ.34ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು
ಶೇ.76ರಷ್ಟು ಸಚಿವರು ಕೋಟಿಪತಿಗಳು
ಹೊಸದಿಲ್ಲಿ,ಆ.5: ರಾಜ್ಯ ವಿಧಾನಸಭೆಗಳ ಶೇ.34ರಷ್ಟು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ ಮತ್ತು ಶೇ.76ರಷ್ಟು ಸಚಿವರು ಸರಾಸರಿ 8.59 ಕೋ.ರೂ. ವೌಲ್ಯದ ಆಸ್ತಿಯೊಂದಿಗೆ ಕೋಟಿ ಪತಿಗಳಾಗಿದ್ದಾರೆ ಎಂದು ದಿಲ್ಲಿಯ ಚಿಂತನ ಚಾವಡಿ ಎಡಿಆರ್ ನಡೆಸಿರುವ ನೂತನ ಅಧ್ಯಯನವೊಂದು ತಿಳಿಸಿದೆ.
29 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಜನರನ್ನು ವಿಶ್ಲೇಷಣೆಗೊಳಪಡಿಸಲಾಗಿತ್ತು. ಈ ಪೈಕಿ 462(ಶೇ.76) ಜನರು ಕೋಟಿಪತಿಗಳಾಗಿದ್ದಾರೆ ಎಂದು ಅದು ಹೇಳಿದೆ.
ಅತ್ಯಧಿಕ ಆಸ್ತಿಗಳನ್ನು ಹೊಂದಿರುವ ಸಚಿವರಲ್ಲಿ ಆಂಧ್ರಪ್ರದೇಶದ ಟಿಡಿಪಿಯ ಪೊಂಗುರು ನಾರಾಯಣ (496ಕೋ.ರೂ) ಮತ್ತು ಕರ್ನಾಟಕದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್(251 ಕೋ.ರೂ.) ಅವರು ಸೇರಿದ್ದಾರೆ.
609 ಸಚಿವರ ಪೈಕಿ 210(ಶೇ.34) ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇದೇ ರೀತಿ ವಿಶ್ಲೇಷಣೆಗೊಳಗಾದ 78 ಕೇಂದ್ರ ಸಚಿವರ ಪೈಕಿ 24 (ಶೇ.31) ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದಿರುವ ಅಧ್ಯಯನ ವರದಿಯು,ರಾಜ್ಯಗಳ 113 ಸಚಿವರು ಕೊಲೆ,ಕೊಲೆಯತ್ನ,ಅಪಹರಣ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ . ಕೇಂದ್ರ ಸಚಿವರ ಪೈಕಿ 14 ಜನರ ವಿರುದ್ಧ ಇಂತಹ ಗಂಭೀರ ಪ್ರಕರಣಗಳಿವೆ. ರಾಜ್ಯಗಳ ಸಚಿವರಿಗೆ ಹೋಲಿಸಿದರೆ ಕೇಂದ್ರದ ಸಚಿವರು ಸರಾಸರಿ 12.94 ಕೋ.ರೂ.ವೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದೆ.
..........................
ಸೌದಿ: ಭಾರತೀಯರ ಬವಣೆ ನೀಗಿಸಲು ಬಿಕ್ಕಟ್ಟು ನಿರ್ವಹಣೆ ತಂಡ ರಚನೆ
ಹೊಸದಿಲ್ಲಿ,ಆ.5: ಉದ್ಯೋಗ ಕಳೆದುಕೊಂಡಿರುವ ಸಾವಿರಾರು ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಬಿಕ್ಕಟ್ಟು ನಿರ್ವಹಣೆ ತಂಡವೊಂದನ್ನು ಸೌದಿ ಅರೇಬಿಯ ರಚಿಸಿದೆ. ಇದೇ ವೇಳೆ ಕಾರ್ಮಿಕರ ವೇತನ ಬಾಕಿಗಳನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿಯೊಂದನ್ನು ನೇಮಕಗೊಳಿಸಲಾಗಿದೆ.
ಈ ಮಾನವೀಯ ಸಮಸ್ಯೆಯನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸಲಾಗುತ್ತಿದೆ ಮತ್ತು ತಾಯ್ನಿಡಿಗೆ ಮರಳಲು ಬಯಸುವ ಕಾರ್ಮಿಕರ ನಿರ್ಗಮನ ಪ್ರಕ್ರಿಯೆಯನ್ನು ತ್ವರಿತಗೊಳಿಸಿರುವುದಾಗಿ ಸೌದಿ ಸರಕಾರವು ಭಾರತಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದರು.
ಎಷ್ಟು ಭಾರತೀಯರು ಸ್ವದೇಶಕ್ಕೆ ಮರಳಲು ಬಯಸಿದ್ದಾರೆ ಮತ್ತು ಬೇರೆ ಕಂಪೆನಿಗಳಲ್ಲಿ ಉದ್ಯೋಗಗಳನ್ನು ಕಂಡುಕೊಳ್ಳಲು ಎಷ್ಟು ಜನ ಅಲ್ಲೇ ಉಳಿಯಲು ಇಚ್ಚಿಸುತ್ತಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬರಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.
ವೇತನಬಾಕಿ, ಉದ್ಯೋಗಾವಕಾಶವಿರುವ ಬೇರೆ ಕಂಪೆನಿ ಗಳಿಗೆ ವರ್ಗಾವಣೆ, ಸ್ವದೇಶಕ್ಕೆ ವಾಪಸಾತಿ ಮತ್ತು ವಿವಿಧ ಕಾರ್ಮಿಕ ಶಿಬಿರಗಳಲ್ಲಿಯ ವಾಸಸ್ಥಿತಿ ಇವು ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಾಗಿವೆ ಎಂದು ಅವರು ತಿಳಿಸಿದರು.
ಈ ಮೊದಲು ಸೌದಿ ಕಾನೂನಿನಂತೆ ಕಾರ್ಮಿಕರು ಕಾರ್ಮಿಕ ನ್ಯಾಯಾಲಯಗಳಿಗೆ ಹೋಗುತ್ತಿದ್ದರು. ಈಗ ಸೌದಿ ಅರೇಬಿಯದ ಕಾರ್ಮಿಕ ಸಚಿವಾಲಯವು ಕಾರ್ಮಿಕರ ದೂರುಗಳನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಿದೆ ಎಂದ ಸ್ವರೂಪ್, ಕಾರ್ಮಿಕ ಸಚಿವಾಲಯವು ವಕೀಲರೋರ್ವರನ್ನು ನೇಮಿಸಲಿದೆ ಮತ್ತು ಈ ಬಗ್ಗೆ ನಿಖರವಾದ ವಿಧಿವಿಧಾನ ನಮಗೆ ಮುಂದಿನ 2-3 ದಿನಗಳಲ್ಲಿ ತಿಳಿಯಲಿದೆ ಎಂದರು







