2014ರಲ್ಲಿ 12 ಸಾವಿರಕ್ಕೂ ಹೆಚ್ಚು ರೈತರು-ಕೃಷಿ ಕಾರ್ಮಿಕರ ಆತ್ಮಹತ್ಯೆ: ಸರಕಾರ
ಹೊಸದಿಲ್ಲಿ, ಆ.5: ದೇಶಾದ್ಯಂತ 2014ರಲ್ಲಿ 12 ಸಾವಿರಕ್ಕೂ ಹೆಚ್ಚು ರೈತರು ಹಾಗೂ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸರಕಾರವು ರಾಜ್ಯಸಭೆಗಿಂದು ಮಾಹಿತಿ ನೀಡಿದೆ.
5,650 ರೈತರು ಹಾಗೂ 6 ಸಾವಿರಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆಂದ ಕೇಂದ್ರ ಕೃಷಿ ಸಚಿವ ರಾಧಾ ಮೋಹನ ಸಿಂಗ್, 2014ರಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ 12,360 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿದರು.
ಪ್ರಶ್ನಾವಧಿಯಲ್ಲಿ ಹಲವು ಸದಸ್ಯರು ರೈತರ ಆತ್ಮಹತ್ಯೆ ಕುರಿತು ಕಳವಳ ವ್ಯಕ್ತಪಡಿಸಿದರು. 2014ರಲ್ಲಿ ದೇಶದಲ್ಲಿ ಕೃಷಿವಲಯ ಸೇರಿದಂತೆ ಒಟ್ಟು 1.31 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಸಿಂಗ್ ಹೇಳಿದರು. ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ಕಡಿಮೆ ತೋರಿಸ ಲಾಗಿದೆಯೆಂಬ ಸದಸ್ಯರೊಬ್ಬರ ಆರೋಪವನ್ನು ಅವರು ನಿರಾಕರಿಸಿದರು.
ಮೃತ ರೈತರ ಕುಟುಂಬಗಳಿಗೆ ಕೇಂದ್ರದಿಂದ ಪರಿಹಾರ ಪಾವತಿಸಬೇಕು ಹಾಗೂ ಅವರ ಸಾಲವನ್ನು ಮನ್ನಾ ಮಾಡಬೇಕೆಂದು ಸದಸ್ಯರು ಸಲಹೆ ನೀಡಿದಾಗ, ರೈತರ ಆದಾಯ ವೃದ್ಧಿಯು ಬಹು ಮುಖ್ಯವಾದ ಪರಿಹಾರವಾಗಿದೆ. ಸರಕಾರವು ಆ ಬಗ್ಗೆ ಗಮನ ನೀಡುತ್ತಿದೆಯೆಂದು ಸಿಂಗ್ ತಿಳಿಸಿದರು.
ಕೃಷಿ ವಲಯದ ಸಂಕಷ್ಟ ನಿವಾರಣೆಗಾಗಿ ಸರಕಾರವು ಪ್ರಧಾನಮಂತ್ರಿ ಬಿಮಾ ಯೋಜನೆ ಸಹಿತ ಅನೇಕ ಯೋಜನೆಗಳನ್ನು ಆರಂಭಿಸಿದೆ. ಹಲವು ರಾಜ್ಯಗಳು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಹೆಚ್ಚಿಸಿವೆಯೆಂದು ಅವರು ಹೇಳಿದರು.
ಕಳೆದ ವರ್ಷ ಜುಲೈಯಿಂದ ಪಂಜಾಬ್ ಪರಿಹಾರ ಮೊತ್ತವನ್ನು ರೂ. 2 ಲಕ್ಷದಿಂದ 3 ಲಕ್ಷಕ್ಕೆ ಏರಿಸಿದ್ದರೆ, ಆಂಧ್ರಪ್ರದೇಶ ರೂ. 5 ಲಕ್ಷಗಳಿಗೆ ಹೆಚ್ಚಿಸಿದೆ. ತೆಲಂಗಾಣವೂ ಪರಿಹಾರವನ್ನು ರೂ. 1 ಲಕ್ಷದಿಂದ ರೂ. 5 ಲಕ್ಷಕ್ಕೇರಿಸಿದೆ. ಕರ್ನಾಟಕವು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ರೂ. 1 ಲಕ್ಷದಂತೆ ನೀಡುತ್ತಿದೆ. ಮಹಾರಾಷ್ಟ್ರದಲ್ಲಿ ರೂ. 1 ಲಕ್ಷ ಪರಿಹಾರ ನೀಡಲಾಗುತ್ತದೆ.





