ವಕೀಲ ಕಾತರಿಕಿ ವಿರುದ್ಧ ಉಗ್ರಪ್ಪ ಕಿಡಿ
ಸರಕಾರದ ತೀರ್ಮಾನಕೆ್ಕ ವಿರುದ್ಧ ಹೇಳಿಕೆ ಸಲ್ಲ
ಬೆಂಗಳೂರು,ಆ.5: ಜನತೆ ಹಿತರಕ್ಷಣೆಗೆ ಜಲ ವಿವಾದಗಳ ನ್ಯಾಯಾಧಿ ಕರಣಗಳ ಮುಂದೆ ರಾಜ್ಯದ ಪರ ವಾದ ಮಂಡಿಸಬೇಕಾದ ನ್ಯಾಯವಾದಿ ಗಳೇ ಸರಕಾರದ ತೀರ್ಮಾನಕ್ಕೆ ವಿರುದ್ಧವಾದ ನಿಲುವು ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ಆಕ್ಷೇಪಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದ ಅವರು, ಮಹಾದಾಯಿ ಜಲ ವಿವಾದ ನ್ಯಾಯಾಧಿಕರಣದ ಮುಂದೆ ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಮೋಹನ್ ಕಾತರಿಕಿ, ರಾಜ್ಯ ಸರಕಾರದ ನಿಲುವಿಗೆ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಟೀಕಿಸಿದರು. ನ್ಯಾಯಾಧಿಕರಣದ ಅಂತಿಮ ತೀರ್ಪು ಬರುವವರೆಗೂ ಕಾಯಬೇಕು. ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯಿಸುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ವಕೀಲ ಮೋಹನ್ ಕಾತರಿಕಿ ಹೇಳಿಕೆ ನೀಡಿದ್ದು, ಅವರಿಗೆ ಈ ಅಧಿಕಾರ ನೀಡಿದ್ದು ಯಾರು ಎಂದು ಉಗ್ರಪ್ಪ ಪ್ರಶ್ನಿಸಿದರು.
ವಿಧಾನ ಮಂಡಲದ ಉಭಯ ಸದನ ಪ್ರಧಾನಿ ಮಧ್ಯಪ್ರವೇಶಕ್ಕೆ ಸರ್ವಾನುಮತದ ತೀರ್ಮಾನ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ, ವಕೀಲರಾದವರು ‘ಕಕ್ಷಿದಾರರ’ ಅಭಿಪ್ರಾಯಕ್ಕೆ ವಿರುದ್ಧ ಮಾತನಾಡುವುದು ಅನುಮಾನ ಹುಟ್ಟಿಸುತ್ತದೆ. ಮೊದಲು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು. ವಕೀಲರ ತಂಡದ ವೈಫಲ್ಯ: ಮಹಾದಾಯಿ ವಿವಾದದಲ್ಲಿ ರಾಜ್ಯಕ್ಕೆ ಕನಿಷ್ಠ 45 ಟಿಎಂಸಿ ನೀರು ದೊರೆಯಬೇಕು. ಅದಕ್ಕೂ ಮೊದಲು ಕುಡಿಯುವ ನೀರಿಗೆ 7.5 ಟಿಎಂಸಿ ನೀರು ಬಳಸಿಕೊಳ್ಳಲು ರಾಜ್ಯ ಸರಕಾರ ಮನವಿ ಮಾಡಿತ್ತು. ರಾಷ್ಟ್ರೀಯ ಜಲನೀತಿ ಅನ್ವಯ ಕುಡಿಯುವ ನೀರಿನ ಯೋಜನೆಗೆ ನ್ಯಾಯಾಧಿಕರಣ ಆದ್ಯತೆ ನೀಡಿಲ್ಲ ಎಂದು ದೂರಿದರು.
ಸುಪ್ರೀಂ ಕೋರ್ಟ್ ಕುಡಿಯುವ ನೀರಿನ ವಿಚಾರದಲ್ಲಿ ವಿವಾದ ಬದಿಗಿಟ್ಟು ಅನುಮತಿ ನೀಡಬೇಕೆಂದು ತೀರ್ಪು ನೀಡಿದೆ. ಹೀಗಿದ್ದರೂ ನ್ಯಾಯಾಧಿ ಕರಣದಲ್ಲಿ ನಮಗೆ ನ್ಯಾಯ ಸಿಗಲಿಲ್ಲ. ಮಧ್ಯಾಂತರ ತೀರ್ಪಿನ ನಂತರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶ ವಿತ್ತು. ಆದರೆ, ರಾಜ್ಯದ ಪರ ವಾದಿಸಬೇಕಾದ ವಕೀಲ ಕಾತರಿಕಿ ಅವರು ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
ಕೃಷ್ಣಾ, ಕಾವೇರಿ ಹಾಗೂ ಮಹಾದಾಯಿ ಜಲ ವಿವಾದಗಳಲ್ಲಿ ವಕೀಲರ ತಂಡ ರಾಜ್ಯದ ಜನತೆಗೆ ಒಳಿತಾಗುವ ತೀರ್ಪುಗಳು ಬರುತ್ತಿಲ್ಲ. ಆದುದರಿಂದ ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಆಲೋಚಿಸಬೇಕು. ರಾಜ್ಯದ ಹಿತರಕ್ಷಣೆಗಾಗಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.







