ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಆನಂದಿಬೆನ್

ಅಹ್ಮದಾಬಾದ್, ಆ.6: ಹಿರಿಯ ಬಿಜೆಪಿ ನಾಯಕ ಹಾಗೂ ಆನಂದಿಬೆನ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ನಿತಿನ್ ಪಟೇಲ್ ಮುಂದಿನ ಮುಖ್ಯಮಂತ್ರಿಯಾಗುವರೆಂಬ ಸುದ್ದಿಯ ನಡುವೆಯೇ ನಡೆದ ಆಶ್ಚರ್ಯಕರ ಬೆಳವಣಿಗೆಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯ್ ರೂಪಾನಿಯವರನ್ನು ಗುಜರಾತ್‌ನ ಹೊಸ ಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ. ಈ ಮೂಲಕ ನಿತಿನ್ ಪಟೇಲ್ ಅವರ ಹೆಸರು ಸೂಚಿಸಿದ್ದ ಹಾಗೂ ತನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಆನಂದಿಬೆನ್ ಅವರಿಗೆ ಸಡ್ಡು ಹೊಡೆದಿದ್ದಾರೆ.
ಮೂಲಗಳ ಪ್ರಕಾರ ಆನಂದಿಬೆನ್ ತಮ್ಮ ರಾಜೀನಾಮೆ ನಿರ್ಧಾರವನ್ನು ಫೇಸ್‌ಬುಕ್ ಮುಖಾಂತರ ಘೋಷಿಸಿದ್ದು ಶಾಗೆ ಸರಿ ಕಂಡಿಲ್ಲ. ಈ ನಡುವೆ ವಿಜಯ್ ರೂಪಾನಿಯನ್ನು ಗುಜರಾತ್ ಸಿಎಂ ಎಂದು ಘೋಷಿಸುವ ಮೊದಲು ಶಾ ಹಾಗೂ ಆನಂದಿಬೆನ್ ನಡುವೆ ನಡೆದ ಮಾತುಕತೆ ವೇಳೆ ಆನಂದಿಬೆನ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆನ್ನಲಾಗಿದೆ.
ಈ ಸಭೆಯಲ್ಲಿ ಆನಂದಿಬೆನ್ ಅವರು ಶಾ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು, ತನ್ನ ಮುಖ್ಯಮಂತ್ರಿ ಅವಧಿಯಲ್ಲಿ ಪಕ್ಷ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸಿದೆಯೆಂದೂ ಆರೋಪಿಸಿದ್ದರು. ಆದರೆ ಶಾ ತಾನು ರೂಪಾನಿಯನ್ನೇ ಸಿಎಂ ಮಾಡುವೆನೆಂದು ಹೇಳಿದ್ದರಲ್ಲದೆ, ಆನಂದಿಬೆನ್ ಆರೋಪಗಳನ್ನೆಲ್ಲಾ ನಿರಾಕರಿಸಿದರೆನ್ನಲಾಗಿದೆ.
ಈ ಹಂತದಲ್ಲಿ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ವಿ.ಸತೀಶ್ ಸಭೆಯಿಂದ ಹೊರ ನಡೆದು ಆರೆಸ್ಸೆಸ್ ನಾಯಕರು ಹಾಗೂ ಮೋದಿ ಜೊತೆ ಮಾತನಾಡಿದರೆನ್ನಲಾಗಿದ್ದು, ಶಾಗೆ ಗುಜರಾತ್ ಮುಖ್ಯಮಂತ್ರಿ ಆರಿಸುವ ಸಂಪೂರ್ಣ ಅಧಿಕಾರ ನೀಡಲಾಗಿದೆಯೆಂದು ಮೋದಿಯವರು ಸತೀಶ್ ಅವರಿಗೆ ತಿಳಿಸಿ ಚೆಂಡನ್ನು ನೇರವಾಗಿ ಅಮಿತ್ ಶಾ ಅಂಗಳಕ್ಕೇ ಎಸೆದಿದ್ದರು.
ಈ ವಿಚಾರವನ್ನು ಸತೀಶ್ ಅವರಿಂದ ತಿಳಿದುಕೊಂಡ ಆನಂದಿಬೆನ್ ಅವರಿಗೆ ಶಾ ನಿರ್ಧಾರವನ್ನು ಒಪ್ಪದೇ ಅನ್ಯ ದಾರಿಯಿರಲಿಲ್ಲ.







