ಗುತ್ತಿನಮನೆಯ ಆಟಿಕೂಟದಲ್ಲಿ ಮೇಳೈಸಿದ ಜಾನಪದ ಚಟುವಟಿಕೆಗಳು

ಮಂಗಳೂರು,ಆ.6: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಗುತ್ತಿನಮನೆಯಲ್ಲಿ ಆಯೋಜಿಸಲಾದ ಆಟಿಕೂಟದಲ್ಲಿ ತೆಂಗಿನ ಗರಿ ಹೆಣೆಯುವುದು, ಚಿಕ್ಕಮೇಳ ಯಕ್ಷಗಾನ, ಕಬಿತೆ ಗಾಯನ, ಚೆನ್ನೆಮಣೆ ಸ್ಪರ್ಧೆಯ ಮೂಲಕ ಜಾನಪದ ಚಟುವಟಿಕೆಗಳು ಮೇಳೈಸಿದವು. ತೆಂಗಿನ ಗರಿ ಹೆಣೆಯುವ ಸ್ಪರ್ಧೆಯು ಅತ್ಯಂತ ಕುತೂಹಲವಾಗಿದ್ದು, 10 ವರ್ಷದ ಬಾಲೆಯಿಂದ ಹಿಡಿದು 70ರ ಹರೆಯದವರೆಗಿನ ವಯಸ್ಸಿನ ಬೇಧಬಾಧವಿಲ್ಲದೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ತೆಂಗಿನ ಗರಿ ಹೆಣೆಯುವುದು ಅತ್ಯಂತ ನಾಜೂಕಿನ ಮತ್ತು ಶ್ರದ್ಧೆಯ ಕೆಲಸ. ಒಂದು ಗರಿ ತಪ್ಪಿದರೂ ಇಡೀ ಕೆಲಸವೇ ವ್ಯರ್ಥವಾದಂತೆ. ಅಂತಹ ನಾಜೂಕಿನ, ಅದರಲ್ಲೂ ನಗರ ಜೀವನಕ್ಕೆ ಅಪರೂಪವಾಗುತ್ತಿರುವ ಈ ಕಾರ್ಯದಲ್ಲಿ 10ರ ಹರೆಯದ ಬಾಲಕಿಯೊಬ್ಬಳು ತನ್ನ ಪುಟ್ಟ ಕೈ ಬೆರಳುಗಳಿಂದ ವಿಶೇಷ ರೀತಿಯಲ್ಲಿ ಒಂದು ಬದಿಯಲ್ಲಿ ತೆಂಗಿನ ಗರಿ ಹೆಣೆಯುವ ಮೂಲಕ ನೋಡುಗರನ್ನು ಹುಬ್ಬೇರಿಸಿಬಿಟ್ಟಳು. ಸ್ಪರ್ಧೆಯಲ್ಲಿ ಭಾಗವಹಿಸಲು ತನ್ನ ಅಜ್ಜ ಜಯರಾಮ ಜತೆ ಕಾಸರಗೋಡಿನ ಕುಬಣೂರಿನಿಂದ ಆಗಮಿಸಿದ್ದ ಬಾಲಕಿಯ ಹೆಸರು ಶ್ರೇಯಾ. ಎಸ್‌ಆರ್‌ಎಯುಪಿ ಶಾಲೆಯಲ್ಲಿ 5ನೆ ತರಗತಿಯಲ್ಲಿ ಓದುತ್ತಿರುವ ಈಕೆಯ ತಾಯಿ ರವಿಕಲಾ ಅಂಗವಾಡಿ ಶಿಕ್ಷಕಿ. ತಾಯಿ ಹಾಗೂ ನೆರೆಹೊರೆಯವರು ತೆಂಗಿನ ಗರಿ ಹೆಣೆಯುವುದನ್ನು ನೋಡಿ ತಾನು ಕಲಿತುಕೊಂಡಿರುವ ಈಕೆ ಕಳೆದೊಂದು ವರ್ಷದಿಂದ ಈ ಕಾರ್ಯದಲ್ಲಿ ನಿಪುಣತೆಯನ್ನು ಪಡೆದಿದ್ದಾರೆ. ಬುಟ್ಟಿ, ಚಾಪೆ ಮೊದಲಾದ ಕರಕುಶಲ ವಸ್ತುಗಳನ್ನು ತಾನು ರಚಿಸಬಲ್ಲೆ ಎನ್ನುತ್ತಾಳೆ ಈ ಬಾಲೆ.
ಸ್ಪರ್ಧೆಯಲ್ಲಿ 15 ವರ್ಷದ, ಪುತ್ತೂರಿನ ರಾಮಕುಂಜ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೆ ತರಗತಿ ಕಲಿಯುತ್ತಿರುವ ಪ್ರಕೃತಿ ಕೂಡಾ ತಾನು ಕೂಡಾ ತೆಂಗಿನ ಗರಿ ಹೆಣೆಯಬಲ್ಲೆ ಎಂದು ತೋರಿಸಿಕೊಟ್ಟರು. ಕಳೆದ ವರ್ಷ ಊರಿನ ದೇವಸ್ಥಾನವೊಂದರ ಬ್ರಹ್ಮಕಲಶಕ್ಕೆ ತಾಯಿ ಹಾಗೂ ದೊಡ್ಡಮ್ಮನ ಜತೆ ತೆಂಗಿನ ಗರಿ ಹೆಣೆಯುವುದನ್ನು ಕಲಿತುಕೊಂಡ ಪ್ರಕೃತಿಗೆ ಈ ಕಾರ್ಯ ಇಷ್ಟವಾಯಿತಂತೆ. ನೋಡಲು ಸುಂದರವಾಗಿ ಕಾಣುವ ಕಲಾತ್ಮಕತೆಗೆ ಪ್ರೇರಣೆ ನೀಡುವ ಈ ಕಾರ್ಯ ನಾನೂ ಕಲಿಯುವಂತೆ ಪ್ರೇರಣೆ ನೀಡಿತು ಎನ್ನುತ್ತಾರೆ ಪ್ರಕೃತಿ. ಈ ಹದಿಹರೆಯದ ಮಕ್ಕಳ ಜತೆಗೇ ಏಳೆಂಟು ಮಂದಿ ವಯೋವೃದ್ಧರೂ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು.
ಇದೇ ವೇಳೆ ತುಳು ಗೀತ ಗಾಯನ, ಚೆನ್ನಮಣೆ ಆಟದ ಸ್ಪರ್ಧೆಯ ಜತೆಯಲ್ಲೇ, ‘ಕೃಷ್ಣ ರುಕ್ಮಿಣಿ’ ಚಿಕ್ಕಮೇಳ ಯಕ್ಷಗಾನ ಪ್ರದರ್ಶನಗೊಂಡಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕಲ್ಕೂರ ಪ್ರತಿಷ್ಠಾನ, ವಿಜಯಾ ಬ್ಯಾಂಕ್ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ಆಯೋಜಿಸಲಾದ ಪಿಲಿಕುಳ ಆಟಿಕೂಟವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಉದ್ಘಾಟಿಸಿದರು. ಪಿಲಿಕುಳದಲ್ಲಿ ಆಟಿಕೂಟದ ಮೂಲಕ ಹಿಂದಿನ ಕಾಲದ ಬದುಕು ಅನಾವರಣಗೊಂಡಿದೆ. ತುಳುನಾಡಿನ ಹಿರಿತನಕ್ಕೆ ಈ ರೀತಿಯ ಚಟುವಟಿಕೆಗಳು ಒಂದು ನಿದರ್ಶನ ಎಂದು ಜಾನಕಿ ಬ್ರಹ್ಮಾವರ ಅಭಿಪ್ರಾಯಿಸಿದರು.
ಹಿರಿಯ ವಿದ್ವಾಂಸ, ಪ್ರೊ. ಬಿ.ಎ. ವಿವೇಕ ರೈ ಮಾತನಾಡಿ, ತುಳು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಶೋಧಕಿ ಇಂದಿರಾ ಹೆಗಡೆ, ಸುರೇಂದ್ರ ಹೆಗಡೆ, ಕಾಂತರಾಜು, ವಿ.ಕೆ. ಶೆಟ್ಟಿ, ಪಿಲಿಕುಳ ನಿಸರ್ಗಧಾಮದ ಜಯಪ್ರಕಾಶ್ ಭಂಡಾರಿ, ಪ್ರಭಾಕರ್ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಬಾಯಲ್ಲಿ ನೀರೂರಿಸಿದ ಖಾದ್ಯಗಳು
ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಆಟಿಕೂಟದ ಪ್ರಮುಖ ಆಕರ್ಷಣೆಯಾಗಿದ್ದವು. ಮಹಿಳಾ ಮಂಡಲದ ಸದಸ್ಯರು ತಯಾರಿಸಿದ ತೆಕ್ಕರದಡ್ಡೆ, ಗುರಿಯಪ್ಪ, ಗೆಂಡದಡ್ಡೆ, ಪತ್ರೊಡೆ, ಜೀಗುಜ್ಜೆ ಪೋಡಿ, ಹಲಸಿನ ಗಟ್ಟಿ, ಗಾರಿಗೆ, ಹಲಸಿನ ಚಿಪ್ಸ್‌ನ ಪ್ರಾತ್ಯಕ್ಷಿಕೆಯ ಜತೆಗೆ, ಮಧ್ಯಾಹ್ನ ಆಟಿಕೂಟದ ವಿಶೇಷ ಭೋಜನವನ್ನು ಏರ್ಪಡಿಸಲಾಯಿತು.







