ಆ.10ರಂದು ರಾಷ್ಟ್ರೀಯ ಜಂತುಹುಳ ನಿರ್ಮೂಲನಾ ಕಾರ್ಯಕ್ರಮ
ಮಂಗಳೂರು, ಆ.6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಜಂತುಹುಳ ನಿರ್ಮೂಲನಾ ದಿನಾಚರಣೆಯ ಅಂಗವಾಗಿ ಆ.10ರಂದು ಜಂತುಹುಳ ನಿವಾರಣಾ ಮಾತ್ರೆಯನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು 3,29,234 ಮಕ್ಕಳಿಗೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1ರಿಂದ 19 ವರ್ಷ ಒಳಗಿನವರಿಗೆ ಈ ಮಾತ್ರೆಯನ್ನು ವಿತರಿಸಲಾಗುತ್ತಿದೆ. ಆ.10ರಂದು ಮಕ್ಕಳಿಗೆ ಮಾತ್ರೆ ನೀಡಲು ಅನಾನುಕೂಲವಾದವರಿಗೆ ಆ.17ರಂದು ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಅಂಗನವಾಡಿ, ಅಥವಾ ಶಾಲೆಗಳಲ್ಲಿ ಈ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಹೆತ್ತವರು ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಮಾತ್ರೆಯನ್ನು ತಪ್ಪದೇ ನೀಡಬೇಕು. 1ರಿಂದ 2 ವರ್ಷದವರೆಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ಕುಡಿಸಬೇಕು. 2 ವರ್ಷ ಮೇಲ್ಪಟ್ಟವರು ಒಂದು ಮಾತ್ರೆಯನ್ನು ತೆಗೆದುಕೊಳ್ಳಬೇಕು. ಸರಕಾರಿ ಮತ್ತು ಅನುದಾನಿತ ಎಲ್ಲಾ ಶಾಲಾ ಮಕ್ಕಳಿಗೆ ಈ ಮಾತ್ರೆಯನ್ನು ಪೂರೈಸಲಾಗುತ್ತಿದೆ. ಖಾಸಗಿ ಶಾಲೆಯವರು ಬೇಡಿಕೆ ತಕ್ಕಂತೆ ಅವರಿಗೆ ಮಾತ್ರೆಯನ್ನು ಒದಗಿಸಲಾಗುವುದು ಎಂದವರು ಹೇಳಿದರು.
ಹುಳ ಬಾಧೆ ಇಲ್ಲದಿದ್ದರೂ ಈ ಮಾತ್ರೆಯನ್ನು ತೆಗೆದುಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಆದರೆ ಅನಾರೋಗ್ಯ ಸಮಸ್ಯೆ ಇದ್ದರೆ ಆ ಸಂದರ್ಭ ನೀಡಬಾರದು. ಗುಣಮುಖರಾದ ಬಳಿಕ ನೀಡಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖಾಧಿಕಾರಿಗಳಾದ ಡಾ.ಸಿಖಂದರ್ ಪಾಷಾ,ಅರುಣ್, ರಾಜೇಶ್ ಉಪಸ್ಥಿತರಿದ್ದರು.







