ಮಹಾದಾಯಿ ನದಿ ವಿವಾದ: ಆ.7ರಂದು ಸರ್ವಪಕ್ಷ ಸಭೆ

ಬೆಂಗಳೂರು, ಆ. 6: ಕಳಸಾ-ಬಂಡೂರಿ ಯೋಜನೆ ಹಾಗೂ ಮಹಾದಾಯಿ ನದಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಾಳೆ(ಆ.7) ಬೆಳಗ್ಗೆ 11ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ಏರ್ಪಡಿಸಲಾಗಿದೆ.
ನೀರಾವರಿ ಸಚಿವ ಎಂ.ಬಿ.ಪಾಟೀಲ್, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಗೃಹ ಸಚಿವ ಪರಮೇಶ್ವರ್, ವಿಧಾನ ಮಂಡಲ ಉಭಯ ಸದನಗಳ ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ರೈತ ಮುಖಂಡ ಕೆ. ಎಸ್.ಪುಟ್ಟಣ್ಣಯ್ಯ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ, ಬಂಧಿತ ರೈತರ ಬಿಡುಗಡೆ ಸೇರಿದಂತೆ ಕುಡಿಯುವ ನೀರಿನ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ಅಲ್ಲದೆ, ವಿವಾದ ಇತ್ಯರ್ಥಕ್ಕೆ ಪ್ರಧಾನ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಮತ್ತೊಮ್ಮೆ ಹೊಸದಿಲ್ಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆಯೂ ಚರ್ಚೆ ನಡೆಸಲಾಗುವುದು ಹೇಳಲಾಗಿದೆ.
'ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಂದು ಸರ್ವಪಕ್ಷ ಸಭೆ ನಡೆಯಲಿದ್ದು, ಮಹಾದಾಯಿ ವಿವಾದ ಪರಿಹರಿಸುವ ಸಂಬಂಧ ಚರ್ಚಿಸಲಾಗುವುದು. ಆ ಬಳಿಕ ರಾಜ್ಯದ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ಪಾಲಿನಾರಿಮನ್ ಭೇಟಿ ಮಾಡಲಾಗುವುದು'
-ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವ





