ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಯತ್ನ: ರೈತ ಮುಖಂಡರ ಬಂಧನ
ಮಹಾದಾಯಿ ನದಿ ವಿವಾದ
ಬೆಂಗಳೂರು, ಆ.6: ಮಹಾದಾಯಿ ನದಿ ನೀರು ಹಂಚಿಕೆ ಕುರಿತಂತೆ ನ್ಯಾಯಾಧಿಕರಣ ನೀಡಿದ ಮಧ್ಯಂತರ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಹಾಗೂ ಬಂಧನದಲ್ಲಿರುವ ರೈತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಮುಖಂಡರನ್ನು ಬಂಧಿಸಲಾಯಿತು.
ಶನಿವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಇಲ್ಲಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗುವ ಮೊದಲೇ ಪೊಲೀಸರು ಗಾಂಧೀನಗರದ ಕಚೇರಿಯಲ್ಲಿದ್ದ ರೈತ ಮುಖಂಡರನ್ನು ಬಂಧಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ರೈತ ಮುಖಂಡರಾದ ಕಡಿದಾಳ್ ಶಾಮಣ್ಣ,ಡಾ.ಚಿಕ್ಕಸ್ವಾಮಿ,ಎಚ್.ಆರ್ ಬಸವರಾಜಪ್ಪ, ಅನುಸೂಯಮ್ಮ, ಬಸವರಾಜ ಮಳಲಿ ಸೇರಿ ಪ್ರಮುಖ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದವರನ್ನು ಕಚೇರಿಯಲ್ಲಿ ಬಂಧಿಸಲಾಗಿದೆ. ಇದೇನು ಪ್ರಜಾಪ್ರಭುತ್ವವೇ? ಗೃಹ ಸಚಿವರು ವೈಭವದ ಹುಟ್ಟುಹಬ್ಬ ಬೇಕಿದ್ದರೆ ಆಚರಣೆ ಮಾಡಿಕೊಳ್ಳಲಿ. ಆದರೆ, ಹೋರಾಟದಲ್ಲಿ ಬಂಧಿಯಾಗಿರುವ ಅಮಾಯಕ ರೈತರನ್ನು ಬಿಡುಗಡೆ ಮಾಡಿ ಎಂದು ಸಚಿವರ ಮನೆ ಮುಂದೆ ಹೋರಾಟ ಮಾಡಲು ಮುಂದಾಗುವ ಮೊದಲೇ ಕಚೇರಿಯಲ್ಲಿ ಬಂಧಿಸಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಬಂಧನದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರಿದ್ದಾರೆ. ಅಲ್ಲದೆ, ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆಯೂ ಇದೆ ಎಂದ ಅವರು, ರಾಜ್ಯ ಸರಕಾರಕ್ಕೆ ನೈತಿಕತೆಯಿದ್ದರೆ ಈ ಕೂಡಲೇ ರೈತರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.





