ಕಾನ್ಪುರ ಕಸ್ಟಡಿ ಸಾವು ಪ್ರಕರಣ : ಸಾಯುವ ಮೊದಲು ದಲಿತ ಯುವಕನಿಗೆ ಥಳಿಸಲಾಗಿತ್ತು
ಮರಣೋತ್ತರ ಪರೀಕ್ಷಾ ವರದಿ

ಕಾನ್ಪುರ, ಆ.6: ಈ ವಾರಾರಂಭದಲ್ಲಿ ಪೊಲೀಸ್ ಚೌಕಿಯೊಂದರಲ್ಲಿ ಮೃತನಾಗಿ ಪತ್ತೆಯಾಗಿದ್ದ ದಲಿತ ಯುವಕನಿಗೆ ಸಾಯುವ ಮೊದಲು ತೀವ್ರವಾಗಿ ಥಳಿಸಲಾಗಿತ್ತೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
25ರ ಹರೆಯದ ಕಮಲ್ ವಾಲ್ಮೀಕಿ ಎಂಬ ದಲಿತ ಯುವಕನನ್ನು ದರೋಡೆ ಪ್ರಕರಣವೊಂದರ ವಿಚಾರಣೆಗಾಗಿ ಮಂಗಳವಾರ ರಾತ್ರಿ ಪೊಲೀಸರು ಒಯ್ದಿದ್ದರು. ಆತನಿಗೆ ಬೆನ್ನು ಹಾಗೂ ತಲೆಗೆ ಮಾರಕ ಗಾಯಗಳಾಗಿದ್ದವು. ಲಾಕಪ್‌ನಲ್ಲಿ ಕಮಲ್‌ನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರೇ ಆತನನ್ನು ತೀವ್ರವಾಗಿ ಥಳಿಸಿ, ಬಳಿಕ ನೇಣು ಹಾಕಿದ್ದಾರೆಂದು ಆತನ ಕುಟುಂಬ ಆರೋಪಿಸಿದೆ.
ಕಮಲ್ ಉಸಿರುಗಟ್ಟಿ ಸತ್ತಿದ್ದಾನೆಂದು ಆತನ ಶವಪರೀಕ್ಷೆ ನಡೆಸಿರುವ ವಿಶೇಷಜ್ಞ ವೈದ್ಯರ ತಂಡವೊಂದು ಹೇಳಿದೆ.
ಪೊಲೀಸ್ ಚೌಕಿಯಲ್ಲಿದ್ದ ಎಲ್ಲ 15 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಅವರಲ್ಲಿ ಕೆಲವರು ಕಾಣೆಯಾಗಿದ್ದಾರೆ. ಒಬ್ಬ ಪೊಲೀಸ್ ಸಿಬ್ಬಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಅಪರಾಧದ ಬಗ್ಗೆ ತಪ್ಪೊಪ್ಪಿಕೊಳ್ಳದಿದ್ದಲ್ಲಿ ಕೊಲ್ಲುವ ಬೆದರಿಕೆಯನ್ನು ಪೊಲೀಸರು ತನ್ನ ಸಹೋದರನಿಗೆ ಹಾಕಿದ್ದರೆಂದು ಕಮಲ್‌ನೊಂದಿಗೆ ಪೊಲೀಸರು ವಶಪಡಿಸಿಕೊಂಡಿದ್ದ ಆತನ ಸಹೋದರ ನಿರ್ಮಲ್ ಎಂಬಾತ ಆರೋಪಿಸಿದ್ದಾನೆ.
ನಿರ್ಮಲ್‌ನನ್ನು ಬಳಿಕ ಪೊಲೀಸರು ಬಿಟ್ಟಿದ್ದರು. ಆದಾಗ್ಯೂ ಮಂಗಳವಾರ ರಾತ್ರಿ ತಮ್ಮಿಬ್ಬರಿಗೂ ಪೊಲೀಸರು ಸರಳುಗಳಿಂದ ಥಳಿಸಿದ್ದರು, ಬೈದಿದ್ದರು ಹಾಗೂ ಅಪಹಾಸ್ಯ ಮಾಡಿದ್ದರು. ತಮ್ಮನ್ನು ಫುಟ್‌ಬಾಲ್‌ಗಳಂತೆ ಒದೆದಿದ್ದರೆಂದು ಆತ ದೂರಿದ್ದಾನೆ.
ಕಸ್ಟಡಿ ಸಾವು ಸಂಪೂರ್ಣ ಅನಂಗೀಕಾರಾರ್ಹವೆಂದು ಉತ್ತರಪ್ರದೇಶದ ಪೊಲೀಸ್ ವರಿಷ್ಠ ಜಾವೇದ್ ಅಹ್ಮದ್ ಹೇಳಿದ್ದಾರೆ.







