ಪರಿಶೀಲನೆಗೆ ತೆರಳಿ ದಾರಿ ಸಿಗದೆ ವಾಪಸಾದ ಪುತ್ತೂರು ಎಸಿ
ಬೆಳ್ತಂಗಡಿ: ಅಟ್ರಿಂಜೆ ಕೊರಗ ಕುಟುಂಬಗಳ ದುಸ್ಥಿತಿ

ಬೆಳ್ತಂಗಡಿ, ಆ.6: ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವರ ಗ್ರಾಮದ ಅಟ್ರಿಂಜೆ ಎಂಬಲ್ಲಿ ಬದುಕುತ್ತಿರುವ ಐದು ಕೊರಗ ಕುಟುಂಬಗಳ ದುಸ್ಥಿತಿಯ ಬಗ್ಗೆ ಬಂದ ವರದಿಗಳ ಹಿನ್ನಲೆಯಲ್ಲಿ ಶನಿವಾರ ಪುತ್ತೂರು ಸಹಾಯಕ ಕಮೀಷನರ್ ಡಾ. ರಾಜೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಲು ತೆರಳಿದ್ದರು. ಆದರೆ ಸ್ಥಳಕ್ಕೆ ಹೋಗಲು ದಾರಿ ದೊರಕದೆ ಸುತ್ತಾಡಿ ಹಿಂತಿರುಗಿದ್ದಾರೆ.
ಶನಿವಾರ ಸಹಾಯಕ ಕಮಿಷನರ್ ಬೆಳ್ತಂಗಡಿಗೆ ಆಗಮಿಸಿದ್ದರು. ಆದರೆ ಸಮಾಜಕಲ್ಯಾಣಾಧಿಕಾರಿ ಮೋಹನ್ ಬೇರೆ ಕಾರ್ಯಕ್ರಮದ ನೆಪ ನೀಡಿ ಗೈರು ಹಾಜರಾಗಿದ್ದರು. ಕಂದಾಯ ಇಲಾಖೆಯ ಅಧಿಕಾರಿಗಳು ಎಸಿ ಅವರೊಂದಿಗೆ ತೆರಳಿದ್ದರು. ಆದರೆ ಹುಡುಕಾಡಿದರೂ ಕೊರಗರ ವಸತಿ ತಾಣ ಮಾತ್ರ ಇವರಿಗೆ ಸಿಗಲೇ ಇಲ್ಲ. ಬಳಿಕ ಅಧಿಕಾರಿಗಳು ಸುಲ್ಕೇರಿ ಗ್ರಾಮದ ನಾಯ್ದಗುರಿಗೆ ತೆರಳಿ ಅಲ್ಲಿ ಕೊರಗರಿಗಾಗಿ ಕಾದಿರಿಸಲಾಗಿರುವ 50 ಎಕ್ರೆ ಜಮೀನಿಗೆ ತೆರಳಿ ಅದರ ಪರಿಶೀಲನೆ ನಡೆಸಿದರು. ಹಾಗೂ ಇಲ್ಲಿ ಮೀಸಲಿರಿಸಲಾಗಿರುವ ಇತರೆ ಜಾಗಗಳ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಕಮೀಷನರ್, ಕೊರಗ ಕುಟುಂಬಗಳಿಗೆ ಮನೆ ಒದಗಿಸಲು ಎಲ್ಲರೀತಿಯ ಕ್ರಮ ಕೈಗೊಳ್ಳಲಾಗುವುದು. ಹಾಗೂ ಕೊರಗರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಕೊರಗರ ಕಾಲನಿಗೆ ಮುಂದೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸಹಾಯಕ ಕಮಿಷನರ್ ಅವರೇ ಬಂದರೂ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಮಾತ್ರ ಇನ್ನೂ ಇಲ್ಲಿಗೆ ಭೇಟಿ ನೀಡಲು ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.







