ಪುತ್ತೂರು: ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ಪುತ್ತೂರು, ಆ.6: ಅಲ್ಯುಮಿನಿಯಂ ಕೊಕ್ಕೆಯಲ್ಲಿ ಎಳನೀರು ಕೀಳಲು ತೆರಳುತ್ತಿದ್ದ ವೇಳೆಯಲ್ಲಿ ಹೈಟೆನ್ಷನ್ ತಂತಿ ಸ್ಪರ್ಶಗೊಂಡು ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಸಂಜೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಕೊಡಿನೀರು ಎಂಬಲ್ಲಿ ನಡೆದಿದೆ.
ಕೊಡಿನೀರು ನಿವಾಸಿ ಇಸುಬು(60) ಮೃತಪಟ್ಟ ವ್ಯಕ್ತಿ. ಇಸುಬು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕೆಲ ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದರು. ತನ್ನ ಮನೆಯ ಸಮೀಪದಲ್ಲಿನ ತೆಂಗಿನ ಮರದಿಂದ ಎಳನೀರು ಕೀಳಲೆಂದು ಅಲ್ಯುಮಿನಿಯಂ ಕೊಕ್ಕೆಯನ್ನು ತೆಗೆದುಕೊಂಡು ಹೋಗುತ್ತಿರುವಾಗ ಪಕ್ಕದಲ್ಲಿಯೇ ಹಾದು ಹೋಗಿದ್ದ 33 ಕೆವಿ ಹೈಟೆನ್ಷನ್ ತಂತಿಗೆ ಕೊಕ್ಕೆ ತಗುಲಿ ಗಂಬೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯರ ನೆರವಿನೊಂದಿಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗೆ ತರುವ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.
ರಸ್ತೆಯ ಒಂದು ಬದಿಯಲ್ಲಿ ಇಸುಬು ಅವರ ಮನೆಯಿದ್ದು, ಇನ್ನೊಂದು ಬದಿಯಲ್ಲಿರುವ ತಮ್ಮದೇ ಆದ ತೆಂಗಿನ ಮರದಿಂದ ಕಾಯಿ ಕೀಳಲು ಮನೆಯಿಂದ ಸುಮಾರು 25 ಅಡಿ ಎತ್ತರದ ಅಲ್ಯೂಮಿನಿಯಂ ಕೊಕ್ಕೆ ಹಿಡಿದುಕೊಂಡು ಹೊರಟಿದ್ದರು. ರಸ್ತೆ ಬದಿ 33 ಕೆವಿ ಹೈಟೆನ್ಷನ್ ತಂತಿ ಹಾದು ಹೋಗಿರುವುದು ಗಮನಿಸದೆ ಈ ಅವಘಡ ಸಂಭವಿಸಿದೆ. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





