ರೋಗ ತಡೆಗೆ ಉ.ಕ. ಜಿಲ್ಲಾಡಳಿತ ಕ್ರಮ: ಅಧಿಕಾರಿ ಡಾ.ಅಶೋಕ್ ಕುಮಾರ್
ಕಾರವಾರ, ಆ.6: ನಗರದಲ್ಲಿ ಮೂರು ಡೆಂಗ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಶನಿವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ನಗರಸಭೆ ವ್ಯಾಪ್ತಿಯ ಕೋಡಿಬೀರ ದೇವಸ್ಥಾನ ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ ಪ್ರಕರಣಗಳು ಕಂಡು ಬಂದು 3ಪ್ರಕರಣಗಳು ಖಚಿತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಆ ಪ್ರದೇಶದ 1,533 ಮನೆ/ಅಂಗಡಿಗಳ ಸಮೀಕ್ಷೆ ನಡೆಸಿ, 2,680 ತಾಣಗಳನ್ನು ಗುರುತಿಸಿತ್ತು. ಇವುಗಳ ಪೈಕಿ 72ತಾಣಗಳಲ್ಲಿ ಸೊಳ್ಳೆಗಳ ಲಾರ್ವ ಉತ್ಪತ್ತಿಯಾಗುತ್ತಿರುವುದನ್ನು ಪತ್ತೆ ಹಚ್ಚಿ, ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ್ ಕುಮಾರ್ ಹೇಳಿದ್ದಾರೆ.
ಶನಿವಾರ ನಗರಸಭೆ ಪೌರಾಯುಕ್ತರು, ಡಿಎಚ್‌ಒ ಮತ್ತು ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಅಧಿಕಾರಿಗಳ ತಂಡ ಜಂಟಿಯಾಗಿ ಸದರಿ ಸ್ಥಳದ 72ಮನೆಗಳಿಗೆ ಭೇಟಿ ನೀಡಿ ಮತ್ತೆ ಪರಿಶೀಲನೆ ನಡೆಸಿತು. ಕೆಲವು ಮನೆಗಳಲ್ಲಿ ಮಳೆ ನೀರು ಬೀಳುವ ಸ್ಥಳದಲ್ಲಿ ಒರಳು ಕಲ್ಲು, ಟಯರ್, ಒಡೆದ ಪ್ಲಾಸ್ಟಿಕ್ ಬಕೆಟ್, ಇತರ ಘನತ್ಯಾಜ್ಯ ಇದ್ದು, ಅದರಲ್ಲಿ ಲಾರ್ವಾ ಉತ್ಪತ್ತಿಯಾಗುತ್ತಿರುವುದು ತಂಡದ ಗಮನಕ್ಕೆ ಬಂದಿದೆ. ಅಂತಹ ಕಡೆಗಳಲ್ಲಿ ತಕ್ಷಣ ನೀರನ್ನು ಖಾಲಿ ಮಾಡಿ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಇನ್ನು ಮುಂದೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜತ್ತನ್ನ ತಿಳಿಸಿದ್ದಾರೆ.
ಹಳೆ ಕೆಇಬಿ ರಸ್ತೆಯ ಬದಿಯಲ್ಲಿ ಕೆಲವು ಗುಜರಿ ಸಾಮಾನುಗಳ ಅಂಗಡಿಗಳಲ್ಲಿ ಯಾವುದೇ ಮೇಲ್ಛಾವಣಿ ಇಲ್ಲದೆ ಗುಜರಿ ಸಾಮಾನು ಸಂಗ್ರಹಿಸಿದ್ದು, ಅವುಗಳಲ್ಲಿ ನೀರು ನಿಂತು ಈಡಿಸ್ ಲಾರ್ವಾ ಉತ್ಪತ್ತಿಯಾಗಿರುವುದು ಕಂಡು ಬಂದಿದ್ದು, ತಕ್ಷಣ ಎಲ್ಲ್ಲ ಗುಜರಿ ಸಾಮಗ್ರಿಗಳನ್ನು ವಿಲೇವಾರಿ ಮಾಡಲು ಅಂಗಡಿ ಮಾಲಕರಿಗೆ ಸೂಚಿಸಲಾಗಿದೆ. ಘನತ್ಯಾಜ್ಯಗಳನ್ನು ಚರಂಡಿಗೆ ಎಸೆಯದೆ ನಗರಸಭೆ ವಾಹನಕ್ಕೆ ನೀಡಬೇಕು. ನೀರನ್ನು ಶೇಖರಣೆ ಮಾಡುತ್ತಿದ್ದರೆ ಅದನ್ನು ಸರಿಯಾಗಿ ಮುಚ್ಚಿಡುವಂತೆ ಸೂಚನೆ ನೀಡಲಾಗಿದೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಈಗಾಗಲೇ ಫಾಗಿಂಗ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿ ಮನವಿ: ಕಾರವಾರ ನಗರದಲ್ಲಿ ಕೆಲವು ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ಸಾರ್ವಜನಿಕರು ಈ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಡೆಂಗ್ ಪೀಡಿತರಿಗೆ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಲು ಹಾಗೂ ಈ ಕುರಿತು ನಿಗಾ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಚರಂಡಿಗಳಲ್ಲಿ ಕಟ್ಟಿ ನೀರು ನಿಲ್ಲದಂತೆ ನೋಡಿಕೊಳ್ಳಲು, ಎಲ್ಲ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡಲು ನಗರಸಭೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲು ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮನವಿ ಮಾಡಿದ್ದಾರೆ.







