ಸಾರ್ವಜನಿಕ ಸೇವೆ ಹೆಮ್ಮೆಯ ಸಂಗತಿ: ಡಿಸಿ ಜಿ.ಸತ್ಯವತಿ
ಗ್ರಾಮೀಣಾಭಿವೃದ್ಧಿ ಸವಲತ್ತುಗಳ ಯೋಜನೆ ವಿತರಣಾ ಕಾರ್ಯಕ್ರಮ
ಮೂಡಿಗೆರೆ, ಆ.6: ಜನಸಾಮಾನ್ಯರಿಗೆ ಸರಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಇಲಾಖೆಗಳ ಮೂಲಕ ತಲುಪಿಸುವ ಕೆಲಸವನ್ನು ಮಾಡುತ್ತಿದ್ದರೆ, ಧರ್ಮಕ್ಷೇತ್ರದ ಧರ್ಮಾಧಿಕಾರಿಗಳು ತಾವೇ ಸ್ವತ: ಜನರ ಕಷ್ಟ ಸುಖಗಳನ್ನು ಅರಿತು ಯಾವೊಂದು ಫಲಾಪೇಕ್ಷೆಯನ್ನು ಪಡೆಯದೆ ಸಾರ್ವಜನಿಕ ಸೇವೆಯನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದ್ದಾರೆ.
ತಾಲೂಕಿನ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣಾಭಿವೃದ್ಧಿ ಯೋಜನೆಯ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಅವರು 1991-92ರಿಂದ ಗ್ರಾಮೀಣಾಭಿವೃದ್ಧಿಯನ್ನು ಹಮ್ಮಿಕೊಳ್ಳುವುದರ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಅನ್ನದಾನ, ವಸ್ತ್ರದಾನ, ವಿದ್ಯಾದಾನದಂತಹ ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದ ಬಡ ಕುಟುಂಬಗಳನ್ನು ಗುರುತಿಸುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತಂದು ಸಹನೀಯ ಬದುಕನ್ನು ಕಲ್ಪಿಸಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಜಿಲ್ಲಾ ಆರಕ್ಷಕ ಅಧೀಕ್ಷಕ ಸಂತೋಷ್ ಬಾಬು ಮಾತನಾಡಿ, ಶ್ರೀ ಕ್ಷೇತ್ರವು ಜಾತಿ ಭೇದ ಮರೆತು ಎಲ್ಲರನ್ನು ಒಂದೇ ಎಂಬ ಅರ್ಥದಲ್ಲಿ ಕಾಣುವುದರೊಂದಿಗೆ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಯಾವುದೇ ತಾರತಮ್ಯವೆಸಗದೆ ಅವುಗಳ ಅಭಿವೃದ್ಧಿಗೆ ಧನ ಸಹಾಯ ಮಾಡುತ್ತಿರುವುದು ಒಂದು ಅಪರೂಪದ ಸಂಗತಿಯಾಗಿದೆ ಎಂದರು.
ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ಮಕ್ಕಳನ್ನು ಹಣ ಸಂಪಾದಿಸುವ ಯಂತ್ರವನ್ನಾಗಿ ಮಾಡದೆ ದೇಶದ ಸತ್ಪಜೆಯನ್ನಾಗಿಸಿ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ಮಾಡುವುದು ಪೋಷಕರ ಜವಾಬ್ದಾರಿಯಾಗಿದೆ. ಭಾರತ ದೇಶ ಕೃಷಿ ಅವಲಂಬಿತ ದೇಶ. ರೈತನೇ ದೇಶದ ಬೆನ್ನೆಲುಬು ಎಂದ ಅವರು, ಶ್ರೀ ಕ್ಷೇತ್ರವು ಭಕ್ತರಿಂದ ಬಂದಂತಹ ಹಣವನ್ನು ಭಕ್ತರಿಗೆ ವಿನಿಯೋಗಿಸಲಾಗುತ್ತಿದೆ. ಸಪ್ತಪದಿ ಯೋಜನೆ, ಸಾಮೂಹಿಕ ಉಪನಯನ,ಗೃಹಲಕ್ಷ್ಮೀ ಯೋಜನೆ, ಆನಂದ ಜ್ಯೋತಿ, ಅನ್ನದಾಸೋಹ, ಮಹಿಳಾಭಿವೃದ್ಧ್ದಿ ಯೋಜನೆ, ಧನ್ವಂತರಿ ಯೋಜನೆ, ಶೈಕ್ಷಣಿಕ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಯ ಯೋಜನೆಗಳಡಿಯಲ್ಲಿ 12 ಕೋಟಿ ಹಣವನ್ನು ವಿನಿಯೋಗಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ತಟ್ಟೆ -ಲೋಟ,ಕಲ್ಪವೃಕ್ಷ, ಕೃಷಿ ಉಪಕರಣ ಮತ್ತು ಕಳಸ ಹೋಬಳಿಯ ಶಾಲಾ ಮಕ್ಕಳಿಗೆ ಟಿಪ್ಪಣಿ ಪುಸ್ತಕಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.







