ಪ್ರತಿಭಾ ಪುರಸ್ಕಾರ, ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ

ಕಾರವಾರ, ಆ.6: ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿರುವ ತಂದೆ, ತಾಯಂದಿರು ಇಂದು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಮಕ್ಕಳಿಗೆ ಅವರಿಗೆ ಇಷ್ಟವಾದ ಭಾಷೆಗಳ ಬಗ್ಗೆ ಮನದಟ್ಟು ಮಾಡಿ ಸೂಕ್ತ ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದ್ದಾರೆ. ನಗರದಲ್ಲಿ ಕರ್ನಾಟಕ ಸಂರಕ್ಷಣಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಡ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೈಂಟ್ ಮಿಲಾಗ್ರಿಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ವಿದ್ಯೆ ಹಾಗೂ ಪ್ರತಿಭೆ ಇದು ಯಾರ ಸ್ವತ್ತಲ್ಲ. ಇದನ್ನು ಸಂಪಾದಿಸಬೇಕೆಂದರೆ ಪ್ರತಿಯೊಬ್ಬರು ಕಷ್ಟಪಡಬೇಕು. ವಿದ್ಯೆಯನ್ನು ಕರಗತ ಮಾಡಿಕೊಂಡು ಸ್ವ ಪ್ರಯತ್ನದೊಂದಿಗೆ ಗುರಿಯತ್ತ ಮುನ್ನುಗ್ಗುತ್ತಾ ಹೋದಾಗ ಪ್ರತಿಭೆ ತಾನಾಗಿಯೇ ಗುರುತಿಸಿಕೊಳ್ಳುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಕೇವಲ ವಿದ್ಯೆಯೊಂದೇ ಮುಖ್ಯವಲ್ಲ. ಇದರ ಜೊತೆಗೆ ಶಾರೀರಿಕವಾಗಿ ಆರೋಗ್ಯಕರವಾಗಿರಬೇಕು, ಆಟೋಟ, ಮನೋರಂಜನೆಯಲ್ಲಿ ನಮ್ಮ ಕಲೆಯನ್ನು ಗುರುತಿಸಿಲು ಪ್ರಯತ್ನಿಸಬೇಕು. ಸಾಮಾನ್ಯ ಜ್ಞಾನಗಳನ್ನು ಹೆಚ್ಚು ಹೆಚ್ಚು ಸಂಪಾದಿಸಿ ಆ ಮೂಲಕ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸಬೇಕು ಎಂದು ತಿಳಿಸಿದರು.
ಅದರಂತೆ ಸಂಘವು ದಿಟ್ಟ ಹೆಜ್ಜೆ ಇಟ್ಟಿದ್ದು, ತಾಲೂಕಿಗೆ ಎಸೆಸೆಲ್ಸಿಯಲ್ಲಿ ಕನ್ನಡ ವಿಷಯಕ್ಕೆ 100 ಅಂಕ ಪಡೆದ ಪ್ರತಿಭಾವಂತ ಬಡ ವಿದ್ಯಾರ್ಥಿ ದ್ಯಾಮಕ್ಕ ಅವರನ್ನು ಸಂಘವು ದತ್ತಿಗೆ ತೆಗೆದುಕೊಂಡು ಅವಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಲಿದೆ ಎಂದರು
ಈ ಸಂದರ್ಭ ನಗರಸಭೆ ಸದಸ್ಯೆ ದೇವಿದಾಸ ನಾಯ್ಕ, ಮಹೇಶ ಗೋಳಿಕ್ಕಟ್ಟಿ, ಗಣಪತಿ ಮಾಂಗ್ರೆ, ಸಂತೋಷ ನಾಯ್ಕ, ಗಣೇಶ ಭೀಷ್ಮಣ್ಣನವರ ಉಪಸ್ಥಿತರಿದ್ದರು.







