ವಿಮಾನ ನಿಲ್ದಾಣದಲ್ಲಿ ಮುಸ್ಲಿಮ್ ಮಹಿಳೆಯ ವಿಚಾರಣೆ : ಸಿರಿಯ ಕುರಿತ ಪುಸ್ತಕ ಓದಿದ್ದೇ ತಪ್ಪು!

ಲಂಡನ್, ಆ. 6: ಕಳೆದ ವಾರ ಟರ್ಕಿಯಲ್ಲಿ ಹನಿಮೂನ್ ಮುಗಿಸಿ ಇಂಗ್ಲೆಂಡ್‌ಗೆ ವಾಪಸಾಗುತ್ತಿದ್ದ ಮುಸ್ಲಿಮ್ ಮಹಿಳೆಯೊಬ್ಬರನ್ನು ಸೌತ್ ಯಾರ್ಕ್‌ಶೈರ್‌ನಲ್ಲಿರುವ ಡೊನ್‌ಕಾಸ್ಟರ್ ಶೆಫೀಲ್ಡ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ತಮ್ಮ ಪಾಸ್‌ಪೋರ್ಟ್‌ಗಳ ತಪಾಸಣೆಗಾಗಿ ವಿಮಾನ ನಿಲ್ದಾಣದಲ್ಲಿ ಸರದಿಯಲ್ಲಿ ನಿಂತಿದ್ದ ವೇಳೆ ಫೈಝಾ ಶಾಹೀನ್‌ರನ್ನು ಹೊರಗೆ ಕರೆದುಕೊಂಡು ಹೋಗಲಾಯಿತು.
ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಉದ್ಯೋಗದಲ್ಲಿರುವ ಬ್ರಿಟಿಶ್ ಮಾನಸಿಕ ತಜ್ಞೆಯನ್ನು 15 ನಿಮಿಷಗಳ ಕಾಲ ಪ್ರಶ್ನಿಸಲಾಯಿತು ಎಂದು ‘ದ ಗಾರ್ಡಿಯನ್’ ಗುರುವಾರ ವರದಿ ಮಾಡಿದೆ.
ಈ ಮಹಿಳೆಯ ವರ್ತನೆ ಸಂಶಯಾಸ್ಪದವಾಗಿತ್ತು ಎಂಬುದಾಗಿ ಮುಂದಿನ ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗಾದರೆ ಆ ಮಹಿಳೆಯ ಅಪರಾಧವಾದರೂ ಏನೂ? ಸಿರಿಯದ ಕುರಿತ ಪುಸ್ತಕವೊಂದನ್ನು ಓದುತ್ತಿದ್ದುದು!
ಮುಸ್ಲಿಮ್ ಆಗಿದ್ದುದಕ್ಕೆ ತನ್ನನ್ನು ಈ ರೀತಿಯಾಗಿ ನಡೆಸಿಕೊಳ್ಳಲಾಗಿದೆ ಎಂದು ಬಳಿಕ ಶಾಹಿನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.





