ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಫೋಟಕ ಪತ್ತೆ
ಬಾಂಬ್ ದಳದಿಂದ ನಿಯಂತ್ರಿತ ಸ್ಫೋಟ

ರಿಯೊ ಡಿ ಜನೈರೊ,ಆ.6: ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿರುವ ಇಲ್ಲಿಯ ಮರಕಾನಾ ಕ್ರೀಡಾಂಗಣದಲ್ಲಿ ಶನಿವಾರ ಪುರುಷರ ಸೈಕಲ್ ರಸ್ತೆ ಸ್ಪರ್ಧೆಯು ಅಂತ್ಯಗೊಳ್ಳುವ ಸ್ಥಳದ ಬಳಿ ಸ್ಫೋಟವೊಂದು ಸಂಭವಿಸಿದ್ದು, ಬಹಳ ದೂರದವರೆಗೂ ಶಬ್ದ ಕೇಳಿಸಿತ್ತು. ಆ ಸ್ಥಳದಲ್ಲಿ ಅನಾಥ,ಶಂಕಿತ ವಸ್ತುವೊಂದನ್ನು ಪತ್ತೆ ಹಚ್ಚಿದ ಬಾಂಬ್ ಪತ್ತೆ ದಳವು ಅದನ್ನು ನಿಯಂತ್ರಿತ ಸ್ಫೋಟಗೊಳಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಫೋಟದಿಂದ ಯಾರಿಗೂ ಗಾಯಗಳಾಗಿಲ್ಲ ಅಥವಾ ಯಾವುದೇ ಭೀತಿಯ ವಾತಾವರಣವೂ ಸೃಷ್ಟಿಯಾಗಿರಲಿಲ್ಲ. ಸ್ಪರ್ಧೆ ಅದರ ಪಾಡಿಗೆ ಅದು ಮುಂದುವರಿದಿತ್ತು.
ಸೈಕ್ಲಿಂಗ್ ರೋಡ್ ರೇಸ್‌ನ ಅಂತಿಮ ಗುರಿಯ ಕೆಲವೇ ಯಾರ್ಡ್‌ಗಳ ದೂರದಲ್ಲಿ ಅನಾಥ ಪ್ಯಾಕೇಜ್ ಬಿದ್ದುಕೊಂಡಿದ್ದನ್ನು ಗಮನಿಸಿದ ಸೇನಾ ಪಡೆಯ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ತಕ್ಷಣ ಅದರ ನಿಯಂತ್ರಿತ ಸ್ಫೋಟವನ್ನು ನಡೆಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದರು. ಟಿವಿ ನೇರ ಪ್ರಸಾರದಲ್ಲಿಯೂ ಈ ಸ್ಫೋಟದ ಶಬ್ದ ಕೇಳಿ ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಬಾಂಬ್ ದಳವು ರಿಯೊದಲ್ಲಿ ಹಲವಾರು ಅನಾಥ ಪ್ಯಾಕೇಜ್‌ಗಳನ್ನು ನಿಯಂತ್ರಿತ ಸ್ಫೋಟಗೊಳಿಸಿದೆ.





