ಬಿಜೆಪಿ ಆಡಳಿತದ ರಾಜಸ್ಥಾನದ ಗೋಶಾಲೆಯಲ್ಲಿ ಹಸಿವಿನಿಂದ 500ಕ್ಕೂ ಅಧಿಕ ಗೋವುಗಳ ಸಾವು
ಜೈಪುರ,ಆ.6: ಬಿಜೆಪಿ ಆಡಳಿತದ ರಾಜಸ್ಥಾನದಲ್ಲಿ ಕಳೆದ ಎರಡು ವಾರಗಳಲ್ಲಿ 500ಕ್ಕೂ ಅಧಿಕ ಗೋವುಗಳು ಹಸಿವಿನಿಂದ ನರಳಿ ಸಾವನ್ನಪ್ಪಿವೆ. ಜೈಪುರ ಸಮೀಪದ ಗೋಶಾಲೆಯಲ್ಲಿ ದನಗಳಿಗಾಗಿ ನಿರ್ಮಿಸಲಾಗಿರುವ ಶೆಡ್‌ಗಳು ಸಂಪೂರ್ಣವಾಗಿ ಅಲಕ್ಷಿಸಪಟ್ಟಿದ್ದು,ಗೋವುಗಳ ಪಾಲಿಗೆ ಮೃತ್ಯುಪಂಜರಗಳಾಗಿ ಪರಿಣಮಿಸಿವೆ. ತಥಾಕಥಿತ ಗೋರಕ್ಷಕರು ಅದೆಲ್ಲಿದ್ದಾರೋ ಗೊತ್ತಿಲ್ಲ....
ಹಿಂಗೋನಿಯಾ ಗೋಶಾಲೆಯ 250ಕ್ಕೂ ಹೆಚ್ಚಿನ ಗುತ್ತಿಗೆ ಕಾರ್ಮಿಕರು ತಮ್ಮ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಕಳೆದ ತಿಂಗಳಿನಿಂದ ಮುಷ್ಕರದಲ್ಲಿ ತೊಡಗಿದ್ದಾರೆ. ಆಗಿನಿಂದಲೂ ದನಗಳ ಶೆಡ್‌ಗಳನ್ನು ಯಾರೂ ಸ್ವಚ್ಛಗೊಳಿಸಿಯೇ ಇಲ್ಲ. ಅವುಗಳಿಗೆ ಮೇವು ನೀಡುವವರೂ ಇಲ್ಲ. ಹಲವಾರು ಗೋವುಗಳು ಹಸಿವಿನಿಂದ ನರಳಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದು,ಅವುಗಳ ಕಾಲುಗಳು ಭಾರೀಮಳೆ ಮತ್ತು ಸೆಗಣಿಯಿಂದ ಸೃಷ್ಟಿಗೊಂಡ ಕೊಚ್ಚೆಯಲ್ಲಿ ಸಿಕ್ಕಿಹಾಕಿಕೊಂಡಿವೆ.
ಎಷ್ಟು ಗೋವುಗಳು ಸತ್ತಿವೆ ಎಂಬ ಯಾವುದೇ ಅಧಿಕೃತ ಲೆಕ್ಕವಿಲ್ಲ. ಆದರೆ ಶೆಡ್‌ಗಳ ಸ್ವಚ್ಛತಾ ಕಾರ್ಯದಲ್ಲಿ ನೆರವಾಗಲು ಬಂದಿರುವ ಸ್ವಯಂ ಸೇವಕರು ಕಳೆದೆರಡು ದಿನಗಳಲ್ಲಿ 90ಕ್ಕೂ ಅಧಿಕ ಗೋವುಗಳ ಕಳೇಬರಗಳನ್ನು ತಾವು ಹೊರಕ್ಕೆ ತೆಗೆದಿದ್ದು, ಇನ್ನೂ ಹಲವು ಕಳೇಬರಗಳು ಇವೆ ಎಂದಿದ್ದಾರೆ. ಈ ಗೋಶಾಲೆಯಲ್ಲಿ ಸುಮಾರು 8,000 ಗೋವುಗಳಿವೆ. ಹೆಚ್ಚಿನ ಗೋವುಗಳ ಸಾವಿಗೆ ಹಸಿವೆಯೇ ಕಾರಣ ಹೊರತು ಯಾವುದೇ ಕಾಯಿಲೆಯಲ್ಲವೆಂದು ಸರಕಾರಿ ಪಶುವೈದ್ಯ ಡಾ.ದೇವೇಂದ್ರ ಕುಮಾರ ಯಾದವ್ ಅವರು ದೃಢಪಡಿಸಿದ್ದಾರೆ.
ನೌಕರರಿಗೆ ಕಳೆದ ಮೇ ತಿಂಗಳಿನಿಂದಲೂ ವೇತನ ಪಾವತಿಯಾಗದಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಕಾರ್ಮಿಕರೇ ಇಲ್ಲ, ಹೀಗಿರುವಾಗ ಸಮಸ್ಯೆಯನ್ನು ನಾನು ಪರಿಹರಿಸುವುದು ಹೇಗೆ ಸಾಧ್ಯ ಎಂದು ವಾರ್ಷಿಕ 20 ಕೋ.ರೂ.ಗಳ ಬಜೆಟ್ ಹೊಂದಿರುವ ಈ ಗೋಶಾಲೆಯ ಅಧ್ಯಕ್ಷ ಭಗವಂತ ಸಿಂಗ್ ದೇವಲ್ ಅವರು ತನ್ನನ್ನು ಸಂಪರ್ಕಿಸಿದ ಸುದ್ದಿಗಾರರನ್ನೇ ಪ್ರಶ್ನಿಸಿದ್ದಾರೆ.
ಜೈಪುರ ಮಹಾನಗರ ಪಾಲಿಕೆ ಮತ್ತು ಗೋಶಾಲೆಗೆ ಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸಿರುವ ಸಂಸ್ಥೆಯ ನಡುವೆ ಉಂಟಾಗಿರುವ ವಿವಾದ ವೇತನ ತಡೆಗೆ ಕಾರಣವಾಗಿದೆ.
ಗೋವುಗಳ ಈ ದಯನೀಯ ಸಾವುಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ರಾಜಸ್ಥಾನ ಉಚ್ಚ ನ್ಯಾಯಾಲಯವು ಸರಕಾರದಿಂದ ವರದಿಯೊಂದನ್ನು ಕೇಳಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸರಕಾರ ಕಾರ್ಯಾಚರಣೆಯನ್ನು ಕೈಗೊಂಡಿದ್ದು,ಭಾರೀ ಯಂತ್ರಗಳನ್ನು ಬಳಸಿ ಗೋಶಾಲೆಯಲ್ಲಿ ತುಂಬಿ ಕೊಂಡಿರುವ ಕೊಚ್ಚೆಯನ್ನು ತೆಗೆಯಲಾಗುತ್ತಿದೆ.
ಮುಖ್ಯಮಂತ್ರಿಯವರು ತೀವ್ರ ಕಳವಳ ಗೊಂಡಿದ್ದಾರೆ. ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿದ್ದು, ತನಿಖೆಯನ್ನು ನಡೆಸುವಂತೆ ಮತ್ತು ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ರಾಜ್ಯದ ಸಚಿವ ರಾಜೇಂದರ್ ಸಿಂಗ್ ರಾಠೋಡ್ ತಿಳಿಸಿದರು. ಆಡಳಿತ ಬಿಜೆಪಿ ವಿರುದ್ಧ ದಾಳಿ ನಡೆಸಿದ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಮೇಶ್ವರಲಾಲ್ ಡೂಡಿ ಅವರು, ಗೋರಕ್ಷಕರೀಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸರಕಾರದ ನಿರಾಸಕ್ತಿ ಮತ್ತು ನಿರ್ಲಕ್ಷ ಇದಕ್ಕೆ ಕಾರಣವೆಂದು ಅವರು ಆರೋಪಿಸಿದ್ದಾರೆ.







