ಹಿರೋಶಿಮ ದುರಂತಕ್ಕೆ 71 ವರ್ಷಗಳು
ಟೋಕಿಯೊ, ಆ. 6: ಹಿರೋಶಿಮ ನಗರದ ಮೇಲೆ ನಡೆದ ಅಣು ಬಾಂಬ್ ದಾಳಿಯ 71ನೆ ವಾರ್ಷಿಕ ದಿನದ ಸಂದರ್ಭದಲ್ಲಿ ಜಪಾನ್ ಶನಿವಾರ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿತು. 1945 ಆಗಸ್ಟ್ 6ರಂದು ಅಮೆರಿಕದ ‘ಎನೋಲಾ ಗೇ’ ಎಂಬ ಹೆಸರಿನ ಬಿ-29 ಬಾಂಬರ್ ವಿಮಾನವು ‘ಲಿಟಲ್ ಬಾಯ್’ ಎಂಬ ಹೆಸರಿನ ಮಾರಕ ಅಣು ಬಾಂಬನ್ನು ಸ್ಥಳೀಯ ಸಮಯ ಬೆಳಗ್ಗೆ 8.15ಕ್ಕೆ ಉದುರಿಸಿತು.
ಆಗ ಸೃಷ್ಟಿಯಾದ 4,000 ಡಿಗ್ರಿ ಸೆಲ್ಸಿಯಸ್‌ವರೆಗಿನ ಉಷ್ಣತೆಯಲ್ಲಿ ನಗರದ ಹೆಚ್ಚಿನ ಭಾಗ ಕರಟಿ ಹೋಯಿತು. ಉಕ್ಕನ್ನು ಕರಗಿಸುವ ಸಾಮರ್ಥ್ಯವನ್ನು ಆ ಶಾಖ ಹೊಂದಿತ್ತು. ಕ್ಷಣಾರ್ಧದಲ್ಲಿ ಹತ್ತಾರು ಸಾವಿರ ಜನರು ಕರಟಿ ಹೋದರು.
ಏಳು ದಶಕಗಳ ಹಿಂದೆ ಆ ಮಹಾ ದೌರ್ಜನ್ಯ ಸಂಭವಿಸಿದ ನಿಖರ ಸಮಯದಲ್ಲಿ ಪ್ರಧಾನಿ ಶಿಂರೊ ಅಬೆ ಮತ್ತು 90ಕ್ಕೂ ಹೆಚ್ಚಿನ ದೇಶಗಳು ಮತ್ತು ವಲಯಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 50,000 ಮಂದಿ ಒಂದು ನಿಮಿಷದ ವೌನ ಆಚರಿಸಿದರು. ‘‘ಅಮಾನವೀಯತೆಯ ಈ ಅತ್ಯಂತ ಕರಾಳ ರೂಪವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಒಂದಾಗಿ ಮತ್ತು ಶ್ರದ್ಧೆಯಿಂದ’’ ಕೆಲಸ ಮಾಡುವಂತೆ ಹಿರೋಶಿಮ ಮೇಯರ್ ಕಝುಮಿ ಮಟ್‌ಸುಯಿ ಜಗತ್ತಿಗೆ ಈ ಸಂದರ್ಭದಲ್ಲಿ ಕರೆ ನೀಡಿದರು.





