ಸರಕಾರದ ಜನವಿರೋಧಿ ನೀತಿ ವಿರುದ್ಧ ಸಿಪಿಎಂ ಪ್ರತಿಭಟನೆ

ಮಂಗಳೂರು, ಆ.7: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟಾಚಾರ ವಿರುದ್ಧ ಸಿಪಿಎಂನ ಉರ್ವಸ್ಟೋರ್, ಬೋಳೂರು, ದೇರೆಬೈಲು ಸಂಕೇಶ ವಿಭಾಗ ಸಮಿತಿಯು ಉರ್ವಸ್ಟೋರ್ ಮಾರ್ಕೆಟ್ ಮುಂಭಾಗ ಇತ್ತೀಚೆಗೆ ಪ್ರತಿಭಟನೆ ನಡೆಸಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್, ದೇಶದ ಜನರ ಪಾಲಿಗೆ ಅಚ್ಚೇ ದಿನ್ ನೀಡುತ್ತೇನೆ ಎಂದು ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರ, ಬೆಲೆ ಏರಿಕೆಯ ಆಡಳಿತವನ್ನು ನೀಡುತ್ತಿದೆ. ಕಪ್ಪು ಹಣ ತರುವುದರ ಬದಲು ಅದರ ಸೂತ್ರಧಾರರಿಗೆ ರಾಜ ಮರ್ಯಾದೆ ನೀಡಲಾಗುತ್ತಿದೆ. ಸಾಮಾನ್ಯ ಜನರ ಮೇಲೆ ವಿಪರೀತ ಸೇವಾ ತೆರಿಗೆ, ಸ್ವಚ್ಛ ಭಾರತ ತೆರಿಗೆ ಮತ್ತು ಕೃಷಿ ಕಲ್ಯಾಣ ತೆರಿಗೆ ಹಾಕಿ ಹಗಲು ದರೋಡೆ ಮಾಡುತ್ತಿದೆ. ಅದೇ ರೀತಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೂಡ ಕೇಂದ್ರ ಸರ್ಕಾರದ ಹಾದಿಯಲ್ಲೇ ನಡೆಯುತ್ತಿದ್ದು, ಬಂಡವಾಳಗಾರರಿಗೆ, ಕೈಗಾರಿಕೋದ್ಯಮಿಗಳಿಗೆ ಮಣೆ ಹಾಕುತ್ತಿದೆಯೇ ಹೊರತು ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿ, ಯುವಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಪ್ರತಿಭಟನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯ ಸಂತೋಷ್ ನೀತಿನಗರ ಮತ್ತು ಉರ್ವಸ್ಟೋರ್, ಬೋಳೂರು, ದೇರೆಬೈಲು ಸಂಕೇಶ, ವಿಭಾಗವಾರು ಹೋರಾಟ ಸಮಿತಿಯ ಸಹ ಸಂಚಾಲಕ ಉಮಾಶಂಕರ್ ಭಾಗವಹಿಸಿದ್ದರು. ಪ್ರತಿಭಟನ ಸಭೆಯ ಅಧ್ಯಕ್ಷತೆಯನ್ನು ಅಶೋಕ್ ಶ್ರೀಯಾನ್ ವಹಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯ ಮುಖಂಡರಾದ ಮನೋಜ್, ಕಿಶೋರ್, ನಾಗೇಂದ್ರ, ಇಕ್ಬಾಲ್, ಧನರಾಜ್, ಪ್ರಭಾವತಿ, ಪ್ರಶಾಂತ್, ದಿನೇಶ್ ಮುಂತಾದವರು ವಹಿಸಿದ್ದರು. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.





