ಸಮಸ್ಯೆಗಳನ್ನು ಹಂಚಿಕೊಂಡು ಪರಿಹರಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ರೊಹರಾ ನಿಸಾರ್ ಕರೆ

ಉಪ್ಪಿನಂಗಡಿ, ಆ.7: ನಾವು ಬೇರೊಬ್ಬರನ್ನು ಇಷ್ಟ ಪಡುವ ಮುನ್ನ ನಾವು ನಮ್ಮನ್ನು ಇಷ್ಟ ಪಡಬೇಕು, ಅದರೊಂದಿಗೆ ನಮಗೆ, ನಮ್ಮಲ್ಲಿ ಸಮಸ್ಯೆಗಳು ಇದ್ದರೆ ಅದನ್ನು ಅದುಮಿ ಇಟ್ಟುಕೊಂಡು ಕೊರಗುವುದು, ತಪ್ಪು ಹಾದಿ ತುಳಿಯುವುದು ಸಲ್ಲದು, ಬದಲಾಗಿ ಅದನ್ನು ನಮ್ಮ ಗೆಳೆಯ, ಗೆಳತಿಯೊಂದಿಗೆ, ತಂದೆ, ತಾಯಿ, ತಾಯಿ ಸಮಾನವಾಗಿ ಶಾಲೆಗಳಲ್ಲಿ ಇರುವ ಶಿಕ್ಷಕಿಯರೊಂದಿಗೆ ಹಂಚಿಕೊಂಡು ತಮ್ಮ ಹಾದಿಯನ್ನು ಸುಗಮಗೊಳಿಸಬೇಕು. ಅದು ನಿಜವಾದ ಜೀವನ ಎಂದು ಧರೆ ಟ್ರಸ್ಟ್ ಪುತ್ತೂರು ಇದರ ಸಂಚಾಲಕಿ, ಜೇಸಿಐ ರಾಷ್ಟ್ರೀಯ ತರಬೇತುದಾರೆ ರೊಹರಾ ನಿಸಾರ್ ಹೇಳಿದರು.
ಅವರು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸುರಕ್ಷತಾ ಸಮಿತಿ ವತಿಯಿಂದ ಪಿಯು ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾದ ಮಹಿಳಾ ಸುರಕ್ಷತಾ ಮಾಹಿತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
-ತಂದೆ, ತಾಯಿ, ಶಿಕ್ಷಕರನ್ನು ಪ್ರೀತಿಸಿ: ಸಚಿನಾ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆತ್ಮ ಸಮಾಲೋಚಕಿ ಸಚಿನಾ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆ ದಿನಗಳಲ್ಲಿ ಯಾವುದೇ ಆಕರ್ಷಣೆಗೆ ಒಳಗಾಗಬಾರದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ಇರಬೇಕು, ತಂದೆ-ತಾಯಿ, ಶಿಕ್ಷಕರನ್ನು ಪ್ರೀತಿಸಿ ಒಳ್ಳೆಯ ಉದ್ದೇಶದ ಹಾದಿಯಲ್ಲಿ ಗುರಿ ತಲುಪಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಝೀಝ್ ಬಸ್ತಿಕಾರ್, ನಝೀರ್ ಮಠ, ಕಾಲೇಜಿನ ಪ್ರಭಾರ ಪ್ರಾಚಾರ್ಯ ಮಂಜುನಾಥ ಮಾತನಾಡಿದರು.
ಪ್ರೌಢಶಾಲಾ ವಿಬಾಗದ ಉಪ ಪ್ರಾಚಾರ್ಯ ದಿವಾಕರ ಆಚಾರ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಶಾಂವಿ ರೈ, ಗ್ರಾಪಂ ಸದಸ್ಯ ಯು.ಟಿ.ತೌಸಿಫ್ ಉಪಸ್ಥಿತರಿದ್ದರು. ಉಪನ್ಯಾಸಕಿ ಪುಷ್ಪಾವತಿ ಸ್ವಾಗತಿಸಿದರು. ಜಯಶ್ರೀ ವಂದಿಸಿದರು. ಕಾತ್ಯಾಯಿನಿ ಕಾರ್ಯಕ್ರಮ ನಿರೂಪಿಸಿದರು.





