ಮಂಗಳೂರು: ಹಜ್ ಯಾತ್ರಿಕರ ಕೊನೆಯ ತಂಡ ನಿರ್ಗಮನ

ಮಂಗಳೂರು, ಆ.7: ಕೇಂದ್ರ ಹಜ್ ಸಮಿತಿ ವತಿಯಿಂದ ಹಜ್ ಯಾತ್ರೆ ಕೈಗೊಂಡಿರುವವ ಪೈಕಿ ನಾಲ್ಕನೆ ಹಾಗೂ ಕೊನೆಯ ತಂಡ ಇಂದು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ.
80 ಮಂದಿ ಪುರುಷರು ಹಾಗೂ 70 ಮಂದಿ ಮಹಿಳೆಯರನ್ನೊಳಗೊಂಡ ಏರ್ ಇಂಡಿಯಾವು ಇಂದು ಬೆಳಗ್ಗೆ 11.03ಕ್ಕೆ ಬಜ್ಪೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದು, ಸಂಜೆ ಭಾರತೀಯ ಕಾಲಮಾನ 6:25ಕ್ಕೆ ಮದೀನಾದಲ್ಲಿ ಭೂ ಸ್ಪರ್ಶ ಮಾಡಿದೆ. ಏರ್ ಇಂಡಿಯಾದಲ್ಲಿ ಇಂದು 150 ಮಂದಿ ಹಜ್ ಯಾತ್ರೆ ಕೈಗೊಳ್ಳುವ ಮೂಲಕ ಈವರೆಗೆ ಒಟ್ಟು 608 ಮಂದಿ ಹಜ್ ಯಾತ್ರೆ ಕೈಗೊಂಡಂತಾಗಿದೆ. ಹಜ್ ಯಾತ್ರಿಕರ ಕೊನೆಯ ತಂಡವನ್ನು ಬೀಳ್ಕೊಡಲು ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ , ರಾಜ್ಯ ಹಜ್ ಸಮಿತಿಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಅಬ್ಬಾಸ್ ಶರೀಫ್, ಹಜ್ ಸಲಹಾ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಯಹ್ಯಾನಕ್ವಾ ಮಲ್ಪೆ, ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಿ.ಮಹ್ಮೂದ್ ಹಾಜಿ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್, ಹನೀಫ್ ಹಾಜಿ, ರಫೀಕ್, ಮಹ್ಮೂದ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಕೃತಜ್ಞತೆ
ಹಜ್ ಯಾತ್ರಿಕರಿಗೆ ಅಗತ್ಯ ಸಹಕಾರ ನೀಡಿದ ವಿಮಾನ ನಿಲ್ದಾಣದ ಪರಧಿಕಾರದ ನಿರ್ದೇಶಕ ರಾಧಾಕೃಷ್ಣ, ಸಿಬ್ಬಂದಿ ವರ್ಗ, ಭದ್ರತಾ ವಿಭಾಗ, ಬಜ್ಪೆ ಪೊಲೀಸ್ ಹಾಗೂ ಹಜ್ ಸಮಿತಿಯ ಸ್ವಯಂ ಸೇವಕರಿಗೆ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಕೃತಜ್ಞತೆ ಸಲ್ಲಿಸಿದ್ದಾರೆ.





