ನಿಧಾನಗತಿಯಲ್ಲಿ ಸಾಗುತ್ತಿರುವ ಒಳಚರಂಡಿ ಕಾಮಗಾರಿ

<ಎಚ್.ಎಂ.ರಘು
ಕುಶಾಲನಗರ, ಆ.7: ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.
ಬಡವಾಣೆಗಳ ಕಡೆ ಎಲ್ಲಿ ನೋಡಿದರೂ ಹಳ್ಳ ಕೊಳ್ಳಗಳು ತುಂಬಿಹೋಗಿವೆ. ಜಿಲ್ಲೆಯಾದ್ಯಂತ ಮಳೆ ಬೀಳುತ್ತಿದ್ದರೂ, ಒಳಚರಂಡಿಗೆ ಗುಂಡಿ ತೋಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆೆ. ಇವೆಲ್ಲವನ್ನು ಗಮನಿಸುತ್ತಿರುವ ಸಾರ್ವಜನಿಕರು ಪಟ್ಟಣ ಪಂಚಾಯತ್ ಹಾಗೂ ಒಳಚರಂಡಿ ನಿಗಮದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮನೆಗಳ ಮುಂಭಾಗದಲ್ಲೇ ದೊಡ್ಡ-ದೊಡ್ಡ ಗುಂಡಿಗಳನ್ನು ತೋಡಿದ್ದು ಮಕ್ಕಳಿಗೆ ಆಟವಾಡಲು, ಮನೆಯಲ್ಲಿರುವ ವಾಹನಗಳನ್ನು ಹೊರಕ್ಕೆ ಕೊಂಡು ಹೋಗಲು ಆಗದ ಪರಿಸ್ಥಿತಿ ಉಂಟಾಗಿದೆ. ರಾತ್ರಿ ಸಮಯದಲ್ಲಿ ವಾಹನಗಳು ಒಳಚರಂಡಿಗೆ ಬಿದ್ದು ಹೂತು ಹೋಗಿದ್ದು ಹಾಗೆ ಕೆಲವು ನಾಗರಿಕರು ಅರಿವಿಲ್ಲದೆ ಗುಂಡಿಗೆ ಬಿದ್ದಂತಹ ಘಟನೆಗಳು ಸಹ ವರದಿಯಾಗಿದೆ. ಒಳಚರಂಡಿ ಕಾಮಗಾರಿಯಿಂದ ಅನಾಹುತಗಳು ನಡೆಯುತ್ತಿದ್ದರೂ, ಪಪಂ ಮತ್ತು ಜಿಲ್ಲಾಡಳಿತ ಮೌನವಹಿಸಿರುವುದೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸರಕಾರದಿಂದ ಮಂಜೂರಾದ ಲಕ್ಷಾಂತರ ರೂ. ಅನುದಾನದಲ್ಲಿ ಪಪಂನ 13 ವಾರ್ಡ್‌ಗಳಿಗೆ ಸಂಬಂಧಿಸಿದಂತೆ ರಸ್ತೆ ಡಾಂಬರೀಕರಣ ನಡೆದಿತ್ತು. ಡಾಂಬರೀಕರಣ ನಡೆದ ಬಳಿಕ ಒಳಚರಂಡಿ ಕಾಮಗಾರಿಗಳಿಗೆ ರಸ್ತೆಗಳನ್ನು ಅಗೆಯುವ ಕಾರ್ಯಕ್ಕೆ ಮುಂದಾಗಿರುವುದು ತಿಳಿದ ವಿಚಾರವಾಗಿದೆ. ಸರಕಾರದ ಯಾವುದೇ ಅನುದಾನ ಮಂಜೂರು ಮಾಡುವ ಸಂದರ್ಭದಲ್ಲಿ ಸರಕಾರದ ಸುತ್ತೋಲೆ ಆದೇಶದ ಪತ್ರವು ಜಿಲ್ಲಾಡಳಿತಕ್ಕೆ ಬರುತ್ತದೆ. ಆದರೆ ಇವ್ಯಾವುದರ ಅರಿವಿದ್ದರೂ, ಅರಿವಿಲ್ಲದ ರೀತಿಯಲ್ಲಿ ಪಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿದೆ.
ಒಳಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆಯೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಜಿಲ್ಲಾ ಸಂಚಾಲಕ ಕೆ.ಬಿ ರಾಜ್ ಆರೋಪಿಸಿ ಮಾತನಾಡಿ, ಕಾವೇರಿ ನದಿ ದಡದಲ್ಲಿ ಒಳಚರಂಡಿ ನಿಗಮದ ಯಂತ್ರದ ಕಾಮಗಾರಿ ಕೆಲಸ ನಡೆಯುತ್ತಿದ್ದು, ಮಳೆಗಾಲದಲ್ಲಿ ನೀರಿನ ಒಳಹರಿಯು ಹೆಚ್ಚಾದಂತಹ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಪರಿಸ್ಥಿತಿಯಲ್ಲಿ ನಡೆಯುತ್ತಿದೆ. ಮರಳಿನ ಕೊರತೆಯಿಂದ ಕಲ್ಲಿನ ಹುಡಿಗಳ ಮೂಲಕ ಕಾಮಗಾರಿ ನಡೆಯುತ್ತಿದ್ದು, ಯಾವ ಸಂದರ್ಭದಲ್ಲಾದರೂ ಕುಸಿದು ಬೀಳಬಹುದು. ಯಂತ್ರಗಳಿಂದ ಮಿಶ್ರಣಗೊಳ್ಳುವ ತ್ಯಾಜ್ಯ ವಸ್ತುಗಳು ನೇರವಾಗಿ ಕಾವೇರಿ ನದಿಗೆ ಹೋಗುವಂತೆ ಪೈಪ್‌ಗಳನ್ನು ಅಳವಡಿಸಿರುತ್ತಾರೆ. ಒಂದು ಕಡೆ ಕಾವೇರಿಯ ಪಾವಿತ್ರತೆ ಕಾಪಾಡುವ ಸಲುವಾಗಿ ತಲಕಾವೇರಿಯಿಂದ ತಮಿಳುನಾಡಿನ ಪೋಪ್‌ಹೌಸ್‌ವರೆಗೆ ಸಾಧು ಸಂತರು ಪಾದಯಾತ್ರೆ ಮೂಲಕ ಕಾವೇರಿ ನದಿಯನ್ನು ಉಳಿಸಿ ಮತ್ತು ಸ್ವಚ್ಛತೆ ಬಗ್ಗೆ ಆದ್ಯತೆ ನೀಡಲು ಜಾಥಾ ನಡೆಸುತ್ತಿದ್ದಾರೆ. ಆದರೆ ಇವ್ಯಾವುದರ ಅರಿವಿಲ್ಲದ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದರು. ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಪತ್ರಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.







