ಅಮೆರಿಕಕ್ಕೆ ರಹಸ್ಯ ಮಾಹಿತಿ ಹಸ್ತಾಂತರಿಸಿದ ಅಣುವಿಜ್ಞಾನಿಯ ಗಲ್ಲಿಗೇರಿಸಿದ ಇರಾನ್

ಟೆಹರಾನ್,ಆ.7: ಅಮೆರಿಕಕ್ಕೆ ಅತ್ಯಂದ ರಹಸ್ಯದ ಹಾಗೂ ಮಹತ್ವದ ಮಾಹಿತಿಗಳನ್ನು ಹಸ್ತಾಂತರಿಸಿದ ಅಣು ವಿಜ್ಞಾನಿಯೊಬ್ಬರನ್ನು ಇರಾನ್ ಗಲ್ಲಿಗೇರಿಸಿದೆಯೆಂದು ಟೆಹರಾನ್‌ನ ನ್ಯಾಯಾಂಗದ ವಕ್ತಾರರೊಬ್ಬರು ತಿಳಿಸಿದ್ದಾರೆ.
‘‘ಶತ್ರುವಿಗೆ ದೇಶದ ರಹಸ್ಯಗಳನ್ನು ಬಹಿರಂಪಡಿಸಿದ ಶಹ್ರಾಮ್ ಅಮೀರಿಯನ್ನು ಗಲ್ಲಿಗೇರಿಸಲಾಗಿದೆಯೆಂದು ನ್ಯಾಯಾಂಗ ವಕ್ತಾರ ಗುಲಾಂ ಹುಸೈನ್ ಮೊಹ್ಸೆನಿ ಎಜಿ ತಿಳಿಸಿರುವುದಾಗಿ, ಇರಾನ್‌ನ ಅನ್‌ಲೈನ್ ಸುದ್ದಿಸಂಸ್ಥೆ ಮಿಝಾನ್ ರವಿವಾರ ವರದಿ ಮಾಡಿದೆ. ಅಮಿರಿ, 2009ರಲ್ಲಿ ಸೌದಿ ಆರೇಬಿಯದಿಂದ ನಾಪತ್ತೆಯಾಗಿದ್ದನು. ಒಂದು ವರ್ಷದ ಬಳಿಕ ಆತ ಅಮೆರಿಕದಲ್ಲಿ ಪ್ರತ್ಯಕ್ಷನಾಗಿದ್ದನು. ಶಹ್ರಾಮ್ ಅಮಿರಿ ಇರಾನ್‌ಗೆ ವಾಪಾಸಾಗಲು ನಿರ್ಧರಿಸಿದಾಗ, ಇರಾನಿ ಅಧಿಕಾರಿಗಳು ಆತನನ್ನು ಸ್ವಾಗತಿಸಿದ್ದರು. ಆದರೆ, ಆತ ಟೆಹ್ರಾನ್‌ಗೆ ಆಗಮಿಸಿದ ಬಳಿಕ ಆತನ ಬಗ್ಗೆ ಯಾವುದೇ ಮಾಹಿತಿಯು ಲಭ್ಯವಾಗಿರಲಿಲ್ಲ.
ಇಸ್ಲಾಮಿಕ್ ಗಣರಾಜ್ಯವಾದ ಇರಾನ್‌ಗೆ ಹಿಂತಿರುಗಿದ ಬಳಿಕ ಅಮೀರಿ, ತನ್ನನ್ನು ಅಮೆರಿಕದಲ್ಲಿ ಬಂಧಿತನಾಗಿದ್ದನೆಂದು ಆಪಾದಿಸಿದ್ದನು. ತಾನು ಮದೀನಾದಲ್ಲಿದ್ದಾಗ ಫಾರ್ಸಿ ಮಾತನಾಡುವ ಇಬ್ಬರು ಸಿಐಎ ಏಜೆಂಟರು ಬಂಧೂಕು ತೋರಿಸಿ ಅಪಹರಿಸಿದ್ದರೆಂದು ಆತ ಹೇಳಿಕೊಂಡಿದ್ದ.
‘‘ಶಹ್ರಾಮ್‌ನನ್ನು ಸೌದಿ ಆರೇಬಿಯಾಗೆ ವರ್ಗಾಯಿಸಿದ್ದಾಗ, ಇರಾನ್‌ಗೆ ಆತನ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ಅಮೆರಿಕದ ಗುಪ್ತಚರ ಇಲಾಖೆಯ ಅಧಿಕಾರಿಗಳು ಭಾವಿಸಿದ್ದರು. ಆದರೆ ಆತ ಅಲ್ಲಿ ಏನು ಮಾಡುತ್ತಿದ್ದನೆಂದು ತಮಗೆ ತಿಳಿದಿತ್ತು, ನಾವು ಆತನ ಬಗ್ಗೆ ಕಣ್ಗಾವಲಿರಿಸಿದ್ದೆವು’’ ಎಂದು ನ್ಯಾಯಾಂಗ ವಕ್ತಾರ ಮೊಹ್ಸೆನಿ ಎಜಿ ತಿಳಿಸಿದ್ದಾರೆ.
‘‘ಶಹ್ರಾಮ್, ಇರಾನ್ ಆಡಳಿತಕ್ಕೆ ಸಂಬಂಧಿಸಿದ ಅತ್ಯಂತ ರಹಸ್ಯವಾದ ಮಾಹಿತಿಗಳನ್ನು ನಮ್ಮ ನಂ.1 ಶತ್ರುವಾದ ಅಮೆರಿಕಕ್ಕೆ ಹಸ್ತಾಂರಿಸುತ್ತಿದ್ದ ಹಾಗೂ ಆತ ಶತ್ರುವಿಗೆ ಅತ್ಯಂತ ಗೌಪ್ಯ ಹಾಗೂ ಮಹತ್ವದ ಮಾಹಿತಿಯನ್ನು ಒದಗಿಸುತ್ತಿದ್ದ’’ ಎಂದು ಇಜಿ ತಿಳಿಸಿದ್ದಾರೆ.





