ಪ್ರತಿಧ್ವನಿಸಿದ ಬೆಳೆ ಪರಿಹಾರದ ಅಸಮರ್ಪಕ ವಿತರಣೆ
ಕೆಡಿಪಿ ಸಭೆ
ಮುಂಡಗೋಡ, ಆ.7: ಕಳೆದ ಮೂರು ಕೆಡಿಪಿ ಸಭೆಗಳಲ್ಲಿ ಬೆಳೆ ಪರಿಹಾರದ ಅಸಮರ್ಪಕ ವಿತರಣೆಯ ಕುರಿತು ಗಮನ ಸೆಳೆಯಲಾಗಿದ್ದು, ಇದುವರೆಗೂ ಪರಿಹಾರ ವಿತರಣೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾಪಂ ಸಭಾಭವನದ ಕೆಡಿಪಿ ಸಭೆಯಲ್ಲಿ ನಡೆಯಿತು. ಪ್ರತಿ ಬಾರಿಯೂ ಅಧಿಕಾರಿಗಳು ಬೆಳೆ ಪರಿಹಾರದ ವಿತರಣೆಯಲ್ಲಿನ ದೋಷವನ್ನು ಸರಿಪಡಿಸುವ ಭರವಸೆ ನೀಡುತ್ತಿದ್ದಾರೆಯೇ ಹೊರತು ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. ಇದಕ್ಕೆ ಉತ್ತರಿಸುತ್ತಾ ಮಾತನಾಡಿದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸರಕಾರದ ನಿಯಮದ ಪ್ರಕಾರ, ಒಂದು ಹೆಕ್ಟೇರ್ ಪ್ರದೇಶಕ್ಕೆ 13 ಸಾವಿರ ರೂ. ಪರಿಹಾರ ಕೊಡಲು ಸಾಧ್ಯವಿದೆ ಎಂದರು. ತಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಸಿಡಿಪಿಒ ಜಿಪಂ ಹಾಗೂ ಾಪಂ ಅನುದಾನದಲ್ಲಿ ತಾಲೂಕಿನ ಹಲವೆಡೆ ನಿರ್ಮಿಸಲಾದ ಅಂಗನವಾಡಿ ಕಟ್ಟಡಗಳು ಕಳಪೆಯಾಗಿರುವ ಕುರಿತು ಸಭೆಯ ಗಮನ ಸೆಳೆದರು.
ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಅತಿಥಿ ಶಿಕ್ಷಕರ ನೇಮಕದ ಕುರಿತು ಕ್ರಮ ವಹಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು. ತಾಲೂಕಿನಲ್ಲಿ ಒಟ್ಟು 12 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೀಘ್ರದಲ್ಲೇ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಅವರು ಹೇಳಿದರು.
ಮಳಗಿ ಪಿಡಿಒ ಮಾತನಾಡಿ, ಮಳಗಿ ಗ್ರಾಪಂ ವ್ಯಾಪ್ತಿಯಲ್ಲಿ 8 ಕೆರೆಗಳ ಹೂಳೆತ್ತುವ ಕೆಲಸ ಆರಂಭವಾಗಿದೆ. 50 ವಿವಿಧ ಕಾಮಗಾರಿಗಳ ಅನುಷ್ಠಾನಕ್ಕಾಗಿ 3 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ. ಈಗಾಗಲೇ 12 ತೆರೆದ ಬಾವಿಗಳು ಹಾಗೂ ಕೊಟ್ಟಿಗೆ ಮನೆಗಳನ್ನು ನಿರ್ಮಿಸಲಾಗಿದೆ ಎಂದರು. ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಾರ್ವಜನಿಕರ ಕೆಲಸಗಳು ಶೀಘ್ರವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ಕೆಲಸಕ್ಕೂ ಸಾರ್ವಜನಿಕರು ಹಲವಾರು ಬಾರಿ ಕಚೇರಿ ಸುತ್ತುವ ಪರಿಸ್ಥಿತಿ ಇದೆ ಎಂದು ತಾಪಂ ಸದಸ್ಯ ರಮೇಶ ರಾಯ್ಕರು ಸಭೆಯ ಗಮನ ಸೆಳೆದರು. ತಾಲೂಕಿನಲ್ಲಿ ರೇಷ್ಮೆ ಇಲಾಖೆ ಪ್ರಗತಿ ಕುಂಠಿತವಾಗಿದ್ದು, ಇಲಾಖೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಕೇವಲ ಹೆಸರಿಗೆ ಮಾತ್ರ ಇಲಾಖೆ ತಾಲೂಕಿನಲ್ಲಿ ಕೆಲಸ ಮಾಡುತ್ತಿದೆ. ನಿಜವಾಗಿಯೂ ರೇಷ್ಮೆ ಕೃಷಿ ಲಾಭದಾಯಕ ಉದ್ಯೋಗವಾಗಿದ್ದು, ಇದನ್ನು ತಾಲೂಕಿನ ರೈತರು ಮನಗಾಣಬೇಕಾಗಿದೆ. ಇಲಾಖೆ ಕೂಡ ವಿವಿಧ ಯೋಜನೆಗಳ ಪ್ರಚಾರಕ್ಕೆ ಮುಂದಾಗಬೇಕು ಹಾಗೂ ಇಲಾಖೆಯ ಉಪಯೋಗ ತಾಲೂಕಿನ ಕೃಷಿಕರಿಗೆ ಸಿಗುವಂತಾಗಬೇಕು ಎಂದು ಸಭೆಯನ್ನು ಒತ್ತಾಯಿಸಿತು.







