ಕ್ರೀಡೆಯಲ್ಲಿ ನಾಯಕತ್ವ ಮುಖ್ಯ: ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು,ಆ.7: ಸಾಹಸ ಕ್ರೀಡೆಗಳು ಜೀವನದಲ್ಲಿ ಸಂತೋಷ ಮತ್ತು ಸಾರ್ಥಕತೆಯನ್ನು ತಂದುಕೊಡುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ. ಅಣ್ಣಾಮಲೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಅಡ್ವೆಂಚರ್ ಸ್ಫೋರ್ಟ್ಸ್‌ಕ್ಲಬ್ ನಗರ ಹೊರವಲಯದ ದಿ ತಾಜ್ ರಿಟ್ರೀಟ್ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಸ ಕ್ರೀಡೆಗಳು ನೀಡುವ ಸಂತೋಷ ಕೋಟ್ಯಂತರ ರೂಪಾಯಿ ಗಳಿಸಿದಾಗಲೂ ಸಿಗುವುದಿಲ್ಲ. ಚಿಕ್ಕಮಗಳೂರು ಜಿಲ್ಲೆ ನಿಜಕ್ಕೂ ಸ್ವರ್ಗ ಸದೃಶ್ಯ. ಇಲ್ಲಿಯ ಪ್ರಕೃತಿಯ ಸೌಂದರ್ಯ, ಹಸಿರು, ಬೆಟ್ಟಗುಡ್ಡಗಳು ಅಪರೂಪವಾದುದು. ಯುವಕರ ಸಾಹಸ ಕ್ರೀಡೆಗಳಿಗೆ ಇಲ್ಲಿ ವಿಪುಲ ಅವಕಾಶಗಳಿವೆ. ಗುಣಮಟ್ಟದ ಸಾಹಸ ಚಟುವಟಿಕೆಗಳನ್ನು ಮುನ್ನೆಚ್ಚರಿಕೆಯೊಂದಿಗೆ ನಡೆಸುವುದು ಮುಖ್ಯ. ಕ್ರೀಡೆಯಲ್ಲಿ ನಾಯಕತ್ವ ಪರಿಣಾಮಕಾರಿಯಾಗಿರಬೇಕು ಎಂದು ನುಡಿದರು.
ನಿರ್ಗಮಿತ ಎಸ್ಪಿ ಸಂತೋಷ್‌ಬಾಬು ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಸುಂದರತೆಯ ಜೊತೆಗೆ ಇಲ್ಲಿಯ ಜನರು ಒಳ್ಳೆಯವರು. ಇಲ್ಲಿ ಕೆಲಸಮಾಡಲು ಸಂತೋಷವಾಗುತ್ತದೆ. ಆದರೆ ಕೆಲವು ಘಟನೆಗಳಿಂದ ಇಲ್ಲಿ ಮುಂದುವರಿಯಲು ಮನಸ್ಸಾಗಲಿಲ್ಲ. ನನ್ನ ಸಹಪಾಠಿ ಈಗ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದು ಸಂತೋಷ ತಂದಿದೆ. ಉಡುಪಿಯಲ್ಲಿದ್ದಾಗ ಅವರು ಸಾಕಷ್ಟು ಸಾಹಸಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದವರು. ಉತ್ತಮ ನಾಯಕತ್ವವನ್ನು ರೂಢಿಸಿಕೊಂಡಿದ್ದ ಅಣ್ಣಾಮಲೈ, ಅಡ್ವೆಂಚರ್ ಕ್ಲಬ್‌ಗೆ ಸಹಕಾರ ನೀಡುತ್ತಾರೆಂದ ಸಂತೋಷ್ ಬಾಬು, ತಮಗೆ ಸಮಯದ ಕೊರತೆ ಇತ್ತೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್‌ಅಧ್ಯಕ್ಷೆ ನಳಿನಾಡಿಸಾ, ಕಾರ್ಯದರ್ಶಿ ಕಿಶನ್‌ಗೌಡ ಮಾತನಾಡಿದರು.







