ಆರೆಸ್ಸೆಸ್ ಶಾಖೆಗಳ ಬಲಿಪಶುಗಳು
ಮಾನ್ಯರೆ,
ಇತ್ತೀಚೆಗೆ ಸಂಘಪರಿವಾರದ ಜನರು ಮುಖ್ಯಮಂತ್ರಿಯವರ ಪುತ್ರನ ಸಾವಿನ ಕುರಿತಂತೆ ಸಾಮಾಜಿಕತಾಣಗಳಲ್ಲಿ ವರ್ತಿಸಿದ ರೀತಿ, ಅವರ ಸಂಸ್ಕಾರವನ್ನು ಸಮಾಜಕ್ಕೆ ಬಹಿರಂಗಪಡಿಸಿದೆ. ಇದೇ ಸಂದರ್ಭದಲ್ಲಿ, ಸಿದ್ದರಾಮಯ್ಯ ಅವರ ವರ್ತನೆ, ಗಾಂಭೀರ್ಯ ಅವರ ಗೌರವವನ್ನು ಮೇಲೆತ್ತಿದೆ. ಆರೆಸ್ಸೆಸ್‌ನ ಜನರು ಮಾತು ಮಾತಿಗೆ ಸಂಸ್ಕಾರ, ಗುಣ ನಡತೆ, ಸಂಸ್ಕೃತಿಯ ಕುರಿತಂತೆ ಮಾತನಾಡುತ್ತಾರೆ. ಆದರೆ ಹಿಂಸೆ, ಕ್ರೌರ್ಯ, ಕೆಟ್ಟ ಭಾಷೆ ಇವುಗಳಲ್ಲಿ ಸಂಘಪರಿವಾರದ ಹಿನ್ನೆಲೆಯಿರುವವರೇ ಸದಾ ಯಾಕೆ ಮುಂದಿರುತ್ತಾರೆ? ಅಸಭ್ಯ ಭಾಷೆಗಳನ್ನು ಸಾಮಾಜಿಕ ತಾಣಗಳಲ್ಲಿ ಸಂಘಪರಿವಾರ ಹಿನ್ನೆಲೆಯಿರುವವರೇ ಹೆಚ್ಚು ಹೆಚ್ಚು ಬಳಸುತ್ತಿದ್ದಾರೆ ಯಾಕೆ?
ಇದು ಉಳಿದ ಹಿಂದೂಗಳಿಗೆ ಒಂದು ಎಚ್ಚರಿಕೆಯಾಗಿದೆ. ಇಂದು ಸಂಸ್ಕೃತಿ ಕಲಿಸುತ್ತೇವೆ, ಸಂಸ್ಕಾರ ಕಲಿಸುತ್ತೇವೆ ಎಂದು ಕೆಲವು ಆರೆಸ್ಸೆಸ್ ಶಾಖೆಗಳು ಸ್ಥಳೀಯ ಕೆಳವರ್ಗದ ಹಿಂದೂ ಮಕ್ಕಳನ್ನು ಆಹ್ವಾನಿಸುತ್ತವೆ. ಪಾಲಕರು, ಮಕ್ಕಳು ಸ್ವಲ್ಪ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಲಿ ಎಂದು ಕಳುಹಿಸಿಕೊಡುತ್ತಾರೆ. ಆದರೆ ಅಲ್ಲಿ, ಇನ್ನೊಂದು ಧರ್ಮವನ್ನು ದ್ವೇಷಿಸುವುದನ್ನೇ ಸಂಸ್ಕೃತಿ, ಸಂಸ್ಕಾರವೆಂದು ಕಲಿಸಿಕೊಡುತ್ತಾರೆ. ಕೆಳವರ್ಗದ ಮಕ್ಕಳನ್ನು ದಾರಿತಪ್ಪಿಸುವ ಕೆಲಸ ಶಾಖೆಗಳಲ್ಲಿ ನಡೆಯುತ್ತಿವೆ. ಆದುದರಿಂದ, ಹಿಂದೂಗಳು ತಮ್ಮ ಪುಟಾಣಿ ಮಕ್ಕಳನ್ನು ಇಂತಹ ಶಾಖೆಗಳಿಗೆ ಕಳುಹಿಸಿಕೊಡುವಾಗ ಸಾವಿರ ಬಾರಿ ಯೋಚಿಸಬೇಕು. ನಾಳೆ ನಿಮ್ಮ ಮಕ್ಕಳು ಬೀದಿಗಳಲ್ಲಿ ರೌಡಿಗಳಾಗಿ, ಕ್ರಿಮಿನಲ್‌ಗಳಾಗಿ ಕಾಣಿಸಿಕೊಳ್ಳುವಂತಾಗಬಾರದು. ಇದೀಗ ಪ್ರಧಾನಿ ನರೇಂದ್ರ ಮೋದಿಯವರೇ ಸಂಘಪರಿವಾರದ ಜನರ ಮುಖವಾಡವನ್ನು ಬಹಿರಂಗಪಡಿಸಿದ್ದಾರೆ. ‘‘ಇವರು ಹಗಲು ಗೋರಕ್ಷಕರಾಗಿ ಕೆಲಸ ಮಾಡುತ್ತಾರೆ, ರಾತ್ರಿ ಕ್ರಿಮಿನಲ್ ಕೆಲಸಗಳನ್ನು ಮಾಡುತ್ತಾರೆ’’. ಆದರೆ ಈ ಗೋರಕ್ಷಕರಲ್ಲಿ ಹೆಚ್ಚಿನವರು ಕೆಳವರ್ಗದ ಜನರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಇವರಲ್ಲಿ ಗೋವನ್ನು ಪೂಜಿಸುವ ಬ್ರಾಹ್ಮಣ ಮಕ್ಕಳು ಯಾರೂ ಇಲ್ಲ. ಅವರು ಅಮೆರಿಕದಲ್ಲಿ, ಲಂಡನ್‌ನಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಶಾಖೆಯಲ್ಲಿ ಅರೆಬರೆ ತರಬೇತಿ ಪಡೆದ ಹಿಂದುಳಿದ ವರ್ಗದ ಜನರು ಇಂದು ಗೋರಕ್ಷಕರಾಗಿ, ಪ್ರಧಾನಿಯ ದೃಷ್ಟಿಯಲ್ಲಿ ಕ್ರಿಮಿನಲ್ ಪಟ್ಟವನ್ನೂ ಹೊರಬೇಕಾಗಿದೆ. ಇನ್ನಾದರೂ ಕೆಳವರ್ಗದ ಜನರು ಮೇಲ್ವರ್ಗದ ರಾಜಕೀಯಕ್ಕೆ ಬಲಿಪಶುವಾಗುವುದು ನಿಲ್ಲಬೇಕಾಗಿದೆ.







