ಗೋಸಾಕಣೆ ಲಾಭದಾಯಕವಾಗಲಿ

ಸದ್ಯಕ್ಕೆ ಭಾರತದಲ್ಲಿ ನಡೆಯುತ್ತಿರುವುದು ಪುರಾಣದ ಭಸ್ಮಾಸುರನ ಕತೆ. ‘ತಾನು ಯಾರ ತಲೆಯ ಮೇಲೆ ಕೈ ಇಡುತ್ತೇನೆಯೋ ಅವರು ಭಸ್ಮವಾಗಬೇಕು’ ಎಂದು ಈಶ್ವರನಲ್ಲಿ ಅಸುರ ವರ ಕೇಳುತ್ತಾನಂತೆ. ಈಶ್ವರ ತಥಾಸ್ತು ಎಂದನಂತೆ. ವರ ನಿಜಕ್ಕೂ ಫಲಿಸುತ್ತದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಬೇಕಲ್ಲ? ಅದಕ್ಕಾಗಿ ವರ ಕೊಟ್ಟ ಈಶ್ವರನ ತಲೆಯ ಮೇಲೆಯೇ ಕೈ ಇಡಲು ಮುಂದಾದನಂತೆ. ತನ್ನ ತಲೆಯ ಮೇಲೆ ಕೈ ಇಡಲು ಯಾವಾಗ ಮುಂದಾದನೋ, ತಕ್ಷಣ ವರಕೊಟ್ಟವನಿಗೆ ಭಸ್ಮಾಸುರ ಅಪಾಯಕಾರಿ ಅನ್ನಿಸಿ ಬಿಟ್ಟಿತು. ತನ್ನ ತಲೆಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಆತ, ತಾನು ವರ ಕೊಟ್ಟವನ ವಿರುದ್ಧವೇ ತಿರುಗಿ ಬೀಳುತ್ತಾನೆ.
ನರೇಂದ್ರ ಮೋದಿ ಸದ್ಯಕ್ಕೆ ಅದೇ ಸ್ಥಿತಿಯಲ್ಲಿ ನಿಂತು, ಗೋರಕ್ಷಕರ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ್ದಾರೆ. ಯಾವಾಗ ಗೋರಕ್ಷಕರು ತನ್ನ ತಲೆಯ ಮೇಲೆ ಕೈಯನ್ನು ಇಡಲು ಮುಂದಾದರೋ ಆಗ ಅವರಿಗೆ ಗೋರಕ್ಷಕರು ಈ ದೇಶವನ್ನು ವಿಭಜಿಸುತ್ತಿರುವುದು, ರಾತ್ರಿ ಹೊತ್ತಿನಲ್ಲಿ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಕೇಸರಿ ವೇಷ ತೊಟ್ಟ ಕ್ರಿಮಿನಲ್‌ಗಳು ಎಸಗುತ್ತಿರುವ ದೇಶದ್ರೋಹಿ ಚಟುವಟಿಕೆಯ ವಿರುದ್ಧ ಕೊನೆಗೂ ಪ್ರಧಾನಿಯಾಗಿ ನರೇಂದ್ರಮೋದಿ ತುಟಿ ಬಿಚ್ಚಿದ್ದಾರೆ. ದಾದ್ರಿಯಲ್ಲಿ ಅಖ್ಲಾಕ್ ಎನ್ನುವ ಹಿರಿಯರನ್ನು ಗೋಮಾಂಸದ ಹೆಸರಿನಲ್ಲಿ ಬರ್ಬರವಾಗಿ ಥಳಿಸಿ ಕೊಂದ ಸಂದರ್ಭದಲ್ಲಿ ಆಡಬೇಕಾದ ಮಾತುಗಳು ಇವು.
ಪ್ರಧಾನಿಯ ಮಾತುಗಳೆಲ್ಲವೂ ನಿಜವೇ ಹೌದು. ಆದರೆ ಸತ್ಯವನ್ನು ತಡವಾಗಿ ಆಡುವುದೂ ಅಥವಾ ತನ್ನ ಲಾಭ ನಷ್ಟಗಳನ್ನು ನೋಡಿಕೊಂಡು ಆಡುವುದೂ ಅಪರಾಧವೇ ಆಗಿದೆ. ಇರಲಿ. ತಡವಾಗಿಯಾದರೂ ನಮ್ಮ ಪ್ರಧಾನಿಯ ಬಾಯಿಯಿಂದ ಇಂತಹದೊಂದು ಹೇಳಿಕೆಗಳು ಹೊರಬಿದ್ದುದು ದೇಶದ ಪಾಲಿನ ಅಳಿದುಳಿದ ಭರವಸೆಯಾಗಿದೆ. ಅವರಿಂದ ಅಂತಹ ಮಾತುಗಳನ್ನಾಡಿಸಿದ ಪರಿಸ್ಥಿತಿಗೆ ಈ ದೇಶದ ಜನರು ಋಣಿಯಾಗಬೇಕಾಗಿದೆ.
ನಕಲಿ ಗೋರಕ್ಷಕರ ಕುರಿತಂತೆ ಅನಿರೀಕ್ಷಿತವಾಗಿ ನರೇಂದ್ರ ಮೋದಿಯ ಕಣ್ಣು ಮತ್ತು ಬಾಯಿಯನ್ನು ತೆರೆಸಿದ ಘಟನೆಗಳು ಯಾವುವು ಎನ್ನುವುದು ದೇಶದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಪ್ರತ್ಯೇಕ ವಿವರಣೆಯ ಅಗತ್ಯವಿಲ್ಲ. ಗುಜರಾತ್ ಮತ್ತು ಉತ್ತರಪ್ರದೇಶಗಳಲ್ಲಿ ಗೋರಕ್ಷಕರು ನಡೆಸುತ್ತಿರುವ ದಾಂಧಲೆ ಮತ್ತು ಅವು ಬಿಜೆಪಿಯ ಮೇಲೆ ಬೀರುತ್ತಿರುವ ಪರಿಣಾಮಗಳು ನರೇಂದ್ರ ಮೋದಿಯನ್ನು ಮಾತನಾಡಿಸಿವೆ. ಗುಜರಾತ್‌ನಲ್ಲಿ ಗೋರಕ್ಷಕರ ದಾಂಧಲೆಗಳು ಅಂತಿಮವಾಗಿ ಓರ್ವ ಮುಖ್ಯಮಂತ್ರಿಯನ್ನೇ ಬದಲಾಯಿಸುವಂತಹ ಸನ್ನಿವೇಶವನ್ನು ಗುಜರಾತಿನಲ್ಲಿ ಸೃಷ್ಟಿಸಿತು. ದಲಿತರ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ನಡೆದ ಸಾಲು ಸಾಲು ದಾಂಧಲೆ ಅವರನ್ನು ಒಂದಾಗಿಸುವಂತೆ ಮಾಡಿತು. ಆ ಹಲ್ಲೆ ಕೇವಲ ರಾಜಕೀಯವಾದುದಷ್ಟೇ ಅಲ್ಲ, ಈ ದೇಶದ ಸಾಮಾಜಿಕ ಅಸಮಾನತೆಯೂ ಈ ಹಲ್ಲೆಗಳಿಗೆ ಕುಮ್ಮಕ್ಕು ನೀಡಿದೆ.
ದಲಿತರ ಕುರಿತಂತೆ, ಅಸ್ಪಶ್ಯರ ಕುರಿತಂತೆ ಗುಜರಾತ್ ಸಮಾಜವು ಹೊಂದಿರುವ ಅಸಹನೆಯನ್ನೂ ಅದು ಬಹಿರಂಗಪಡಿಸಿತು. ಗೋವಿನ ಚರ್ಮ ಸುಲಿದ ಆರೋಪದಲ್ಲಿ ದಲಿತರನ್ನು ಸಾರ್ವಜನಿಕವಾಗಿ ಅರೆನಗ್ನಗೊಳಿಸಿ ಥಳಿಸಿದ ಘಟನೆ ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಿಗೇ ದಲಿತರ ಆಕ್ರೋಶ ಸ್ಫೋಟಗೊಂಡಿತು. ಏಕಾಏಕಿ ಅವರು ಬೀದಿಗಿಳಿದರು. ಅವರು ಬೀದಿಗಿಳಿದು ಬರೇ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿ ಸುಮ್ಮಗಾಗಿದ್ದರೆ ಸರಕಾರ ಅಥವಾ ಆರೆಸ್ಸೆಸ್ ಮುಖಂಡರು ವಿಶೇಷವಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಅವರು ‘‘ಇನ್ನು ಮುಂದೆ ಸತ್ತ ದನವನ್ನು ಸಂಸ್ಕಾರ ಮಾಡುವುದಿಲ್ಲ. ನಿಮ್ಮ ತಾಯಿಯನ್ನು ನೀವೇ ಸಂಸ್ಕಾರ ಮಾಡಿ’’ ಎಂದು ಸತ್ತ ದನಗಳನ್ನು ಜಿಲ್ಲಾಡಳಿತ ಕಚೇರಿಯ ಮುಂದೆ ಎಸೆದಾಗ ಸಂಘಪರಿವಾರದ ಸಹಿತ ಎಲ್ಲರೂ ಬೆಚ್ಚಿ ಬೀಳುವಂತಾಯಿತು. ಇದು ಮನುಸಿದ್ಧಾಂತದ ಬುಡವನ್ನು ನಡುಗಿಸುವ ನಿರ್ಧಾರವಾಗಿತ್ತು. ಬಹುಶಃ ಅಂತಹದೊಂದು ಪ್ರತಿಭಟನೆ ದೇಶದ ಯಾವ ಮೂಲೆಯಲ್ಲೂ ದಲಿತರು ಮಾಡಿರಲಿಲ್ಲ.
ಸತ್ತ ದನದ ಎಲುಬುಗಳನ್ನು ಕಚೇರಿಯಲ್ಲಿ ಎಸೆದ ರೀತಿ ಯಾರೂ ಬೆಚ್ಚಿ ಬೀಳಿಸುವಂತಿತ್ತು. ಗುಜರಾತ್‌ನ ಬೀದಿಗಳಲ್ಲಿ ಸತ್ತ ದನಗಳು ಸಂಸ್ಕಾರವಿಲ್ಲದೆ ಕೊಳೆಯುತ್ತಿರುವುದು ಸಂಘಪರಿವಾರದ ವಿಚಾರ, ಸಿದ್ಧಾಂತಗಳನ್ನು ವ್ಯಂಗ್ಯ ಮಾಡತೊಡಗಿತು. ಗೋವನ್ನು ಮಾತೆ ಎಂದು ಪೂಜಿಸುವವರು ಅದರ ಶವವನ್ನು ಯಾಕೆ ಬೀದಿಗೆಸೆಯಬೇಕು? ತಮ್ಮ ತಾಯಂದಿರನ್ನು ಆ ಮಕ್ಕಳೇ ಸಂಸ್ಕಾರ ಮಾಡಬೇಕಲ್ಲವೇ? ಹೀಗೊಂದು ಪ್ರಶ್ನೆ ದೇಶಾದ್ಯಂತ ಮೊಳಗತೊಡಗಿತು. ದಲಿತರು ಬೀದಿಗಿಳಿದು ಮಾಡಿದ ಭಾರೀ ಸಮಾವೇಶ, ಬಿಜೆಪಿಗೆ ಸಾಕಷ್ಟು ಇರಿಸು ಮುರಿಸನ್ನು ಸೃಷ್ಟಿಸಿತು.
ಉತ್ತರಪ್ರದೇಶದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ತೋರ್ಪಡಿಸಿದ ಹುಸಿ ದಲಿತ ಪ್ರೇಮಕ್ಕೂ ಇದು ಭಾರೀ ಆಘಾತವನ್ನು ಉಂಟು ಮಾಡಿತು. ಅಲ್ಲಿನ ಕೆಲವು ಬೌದ್ಧ ಮುಖಂಡರನ್ನು ಜೊತೆಗಿಟ್ಟುಕೊಂಡು ದಲಿತರನ್ನು ಓಲೈಸುವ ಕೆಲಸವನ್ನು ಬಿಜೆಪಿ ಮಾಡತೊಡಗಿತ್ತು. ಆದರೆ ರೋಹಿತ್ ವೇಮುಲಾ ಘಟನೆಯ ಬಳಿಕ ದಲಿತರಿಗೆ ಹತ್ತಿರವಾಗುವ ಅದರ ಪ್ರಯತ್ನವೆಲ್ಲ ವಿಫಲವಾಗುತ್ತಾ ಬಂತು. ಇತ್ತೀಚೆಗೆ ದಲಿತರ ಬೃಹತ್ ಸಾರ್ವಜನಿಕ ಸಮಾವೇಶವೊಂದನ್ನು ಉತ್ತರ ಪ್ರದೇಶದಲ್ಲಿ ಹಮ್ಮಿಕೊಳ್ಳುವ ಯೋಜನೆಯೊಂದನ್ನ ಬಿಜೆಪಿ ಹಾಕಿಕೊಂಡಿತ್ತು. ಸುಮಾರು 50 ಸಾವಿರ ದಲಿತರನ್ನು ಒಂದೆಡೆಗೆ ಸೇರಿಸುವ ಕುರಿತಂತೆ ಅದು ಯೋಚಿಸಿತ್ತು. ಆದರೆ ಅದಕ್ಕೆ ಸಿಕ್ಕಿದ ನೀರಸ ಪ್ರತಿಕ್ರಿಯೆಯ ಕಾರಣದಿಂದಾಗಿ, ಮೈದಾನದಲ್ಲಿ ಹಮ್ಮಿಕೊಳ್ಳಬೇಕಾದ ಸಮಾವೇಶವನ್ನು ಸಣ್ಣದೊಂದು ಹಾಲ್‌ಗೆ ಸ್ಥಳಾಂತರ ಮಾಡಬೇಕಾಯಿತು. ವಿಶೇಷವೆಂದರೆ 50 ಸಾವಿರ ದಲಿತರು ಬಿಡಿ, 500 ಮಂದಿ ದಲಿತರೂ ಆ ಸಮಾವೇಶದಲ್ಲಿ ಭಾಗವಹಿಸಲಿಲ್ಲ. ಇದು ಬಿಜೆಪಿಗೆ ಮರ್ಮಾಘಾತವಾಗಿತ್ತು.
ಇದೇ ಸಂದರ್ಭದಲ್ಲಿ ಗೋರಕ್ಷಕರ ದಾಂಧಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗತೊಡಗಿತು. ವಿಶ್ವಸಂಸ್ಥೆಯೂ ಈ ಕುರಿತು ಆತಂಕ ವ್ಯಕ್ತಪಡಿಸಿತು. ಅಮೆರಿಕವೂ ಭಾರತಕ್ಕೆ ಎಚ್ಚರಿಕೆ ನೀಡಿತು. ಇವೆಲ್ಲದರ ಒಟ್ಟು ಪರಿಣಾಮವಾಗಿ ಗೋರಕ್ಷಕರ ಕುರಿತಂತೆ ನರೇಂದ್ರ ಮೋದಿಸತ್ಯವನ್ನು ಹೇಳಬೇಕಾಗಿ ಬಂತು. ‘ಗೋರಕ್ಷಕರು ಹಗಲಲ್ಲಿ ಗೋರಕ್ಷಣೆಯ ವೇಷ ಧರಿಸುತ್ತಾರೆ. ರಾತ್ರಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ’’ ಎನ್ನುವುದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡರು. ಜೀವಮಾನದಲ್ಲಿ ಗೋವುಗಳನ್ನೇ ಸಾಕದ ನಕಲಿಗಳು ಗೋರಕ್ಷಣೆಗೆ ಇಳಿದ ಪರಿಣಾಮವಾಗಿ ಇಂದು ರೈತರು ಗೋವುಗಳನ್ನು ಸಾಕುವುದಕ್ಕೆ ಹೆದರಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ.
ಗೋವುಗಳ ಸಾಕಣೆಯ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಇದೇ ಸಂದರ್ಭದಲ್ಲಿ ರೈತರು ಹಾಲುಕೊಡದ ಹಸುಗಳನ್ನು ಸಂತೆಯಲ್ಲಿ ಮಾರಿ ಲಾಭ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಅವುಗಳನ್ನು ಗೋಶಾಲೆಗಳು ಪುಕ್ಕಟೆಯಾಗಿ ತಮ್ಮ ವಶ ಮಾಡಿಕೊಳ್ಳುತ್ತಿವೆ. ಸರಕಾರದಿಂದ ಬಂದ ಅನುದಾನವನ್ನು ಕಳ್ಳ ಕೊರಮರು ತಿಂದು ತೇಗುತ್ತಿದ್ದಾರೆ. ಹಸುಗಳು ಗೋಶಾಲೆಯಲ್ಲಿ ಅನ್ನಾಹಾರವಿಲ್ಲದೆ ಸಾಯುತ್ತಿವೆ.
ಗೋವು ಸಾಕಣೆಯೆನ್ನುವುದು ಧರ್ಮಶಾಸ್ತ್ರದ ಭಾಗವಲ್ಲ, ಅರ್ಥಶಾಸ್ತ್ರದ ಭಾಗ ಎನ್ನುವುದನ್ನು ಸರಕಾರ ಇನ್ನಾದರೂ ಅರಿತುಕೊಂಡು, ಗೋ ಸಾಕಣೆಯ ಉದ್ಯಮಕ್ಕೆ ಮುಕ್ತ ಅವಕಾಶ ನೀಡಬೇಕಾಗಿದೆ. ಗೋಮಾಂಸವೂ ಗೋಸಾಕಣೆ ಉದ್ಯಮದ ಒಂದು ಭಾಗ. ಅದು ರೈತರಿಗೆ ನಷ್ಟಗಳನ್ನು ತಪ್ಪಿಸುತ್ತದೆ. ಗೋಸಾಕಣೆ ಲಾಭದಾಯಕವಾದರೆ ಮಾತ್ರ ಗೋವುಗಳ ಕಡೆ ರೈತರು ಆಸಕ್ತಿ ತೋರಿಸಬಹುದು. ಈ ನಿಟ್ಟಿನಲ್ಲಿ ಗೋಮಾಂಸ ಸೇವನೆಗಿರುವ ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸುವುದೇ ಸರಕಾರದ ಮುಂದಿರುವ ಒಂದೇ ಒಂದು ಮಾರ್ಗ. ಇದರಿಂದ ಗೋ ಉದ್ಯಮವೂ ಉಳಿಯುತ್ತದೆ. ದೇಶದ ಬಡ ಜನರಿಗೆ ಪೌಷ್ಟಿಕ ಆಹಾರವೂ ದೊರಕಿದಂತಾಗುತ್ತದೆ.







