ದ.ಕ.: ಸದ್ದಿಲ್ಲದೆ ಸಾಗಿದೆ ಜಲಸಾಕ್ಷರತೆ

ಅಂತರ್ಜಲ ಹೆಚ್ಚಿಸಲು ಇಂಗುಗುಂಡಿಗಳ ನಿರ್ಮಾಣ
ಧಾರ್ಮಿಕ, ಶೈಕ್ಷಣಿಕ ಸ್ಥಳಗಳಲ್ಲಿ ಜೀವಜಲ ಕ್ರಾಂತಿ
ಮಂಗಳೂರು, ಆ.7: ಒಂದೊಮ್ಮೆ ಸಾಕ್ಷರತೆಯ ಮೂಲಕ ಕ್ರಾಂತಿ ಮಾಡಿರುವ ದ.ಕ. ಜಿಲ್ಲೆುಲ್ಲಿ ಪ್ರಸ್ತುತ ಜಲ ಸಾಕ್ಷರತೆಯ ಅಭಿಯಾನ ಸದ್ದಿಲ್ಲದೆ ನಡೆಯುತ್ತಿದೆ. ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಎದುರಾದ ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಜೀವ ಜಲಕ್ಕೆ ಮತ್ತಷ್ಟು ಮಹತ್ವ ದೊರಕಿದೆ. ಗ್ರಾಪಂ ವ್ಯಾಪ್ತಿಗಳಲ್ಲಿ ಮನೆಗಳು ಮಾತ್ರವಲ್ಲದೆ, ಧಾರ್ಮಿಕ ಕ್ಷೇತ್ರಗಳು, ಶೈಕ್ಷಣಿಕ ಸ್ಥಳಗಳಲ್ಲಿ ಭೂಮಿಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂಗು ಗುಂಡಿಗಳ ನಿರ್ಮಾಣ ಕಾರ್ಯವು ಅಭಿ ಯಾನದ ರೂಪು ತಳೆಯುತ್ತಿದೆ. ಈ ಅಭಿಯಾನಕ್ಕೆ ಮುನ್ನುಡಿಯಾಗಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಪಂನಲ್ಲಿ 10,000 ಇಂಗುಗುಂಡಿಗಳ ನಿರ್ಮಾಣಕ್ಕೆ ಪಣ ತೊಡಲಾಗಿದೆ. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಹುವಾಗಿ ಎದುರಿಸಿದ್ದ ಗ್ರಾಪಂಗಳಲ್ಲಿ ನರಿಂಗಾನ ಪ್ರಮುಖ. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಅತೀ ಹೆಚ್ಚು ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾದ ಗ್ರಾಪಂ ಕೂಡಾ ಇದಾಗಿದೆ. ಹಾಗಾಗಿ ಈ ಗ್ರಾಮ ಪಂಚಾಯತನ್ನೇ ಮಾದರಿ ಯಾಗಿಸಿಕೊಂಡು ಲೋಕಶಿಕ್ಷಣ, ಜಿಪಂ, ಸ್ಥಳೀಯಾಡಳಿತ, ಜನಶಿಕ್ಷಣ ಟ್ರಸ್ಟ್‌ಗಳ ಸಹಭಾಗಿತ್ವದಲ್ಲಿ ಮನೆಗಳು, ದೇವಸ್ಥಾನ, ುಸೀದಿ, ಚರ್ಚ್ ಹಾಗೂ ಶಾಲಾ-ಕಾಲೇಜು
ಗಳ ಸುತ್ತಮುತ್ತ ಇಂಗುಗುಂಡಿಗಳ ನಿರ್ಮಾಣದ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯ ನಡೆದಿದೆ. ಜೀವಜಲ ಕ್ರಾಂತಿಯ ಅಭಿಯಾನದ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿರುವ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ‘‘ಜೀವಜಲದ ಅರಿವಿಗಾಗಿ ನೆಲಜಲ ಜಂಗಲ್‌ನ ಉಳಿವಿಗಾಗಿ ಜಲ ಸಾಕ್ಷರತಾ ಅಭಿಯಾನವನ್ನು ವಿವಿಧ ಸರಕಾರಿ ಇಲಾಖೆಗಳು ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ನರಿಂಗಾನ ಗ್ರಾಪಂ ಮೂಲಕ ಅದಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ 60 ಸುಗ್ರಾಮ ಗ್ರಾಪಂಗಳಲ್ಲಿ ಈ ಅಭಿಯಾನ ಕೈಗೊ ಳ್ಳಲಾಗಿದೆ. ಕೊಣಾಜೆ, ಮಾಣಿಲ, ಪೆರುವಾಯಿ ಮೊದಲಾದೆಡೆಗಳಲ್ಲೂ ಇಂಗು ಗುಂಡಿಗಳ ಮೂಲಕ ಜಲ ಸಾಕ್ಷರತೆಯ ಅಭಿಯಾನ ನಡೆ ಯುತ್ತಿದೆ’’ ಎಂದು ವಿವರಿಸಿದ್ದಾರೆ. ಗ್ರಾಪಂ ವ್ಯಾಪ್ತಿಯ ಸುಗ್ರಾಮದ ಸದಸ್ಯರು ತಮ್ಮ ಮನೆಗಳಲ್ಲೇ ಇಂಗುಗುಂಡಿಗಳನ್ನು ರಚಿಸುವ ಮೂಲಕ ಈ ಅಭಿಯಾನಕ್ಕೆ ಒತ್ತು ನೀಡುತ್ತಿದ್ದಾರೆ. ವಿಶೇಷವಾಗಿ ಸುಗ್ರಾಮದ ಸದಸ್ಯೆಯರು ಈ ಕಾರ್ಯಕ್ಕೆ ವಿಶೇಷ ಕಾಳಜಿ ಹಾಗೂ ಆಸಕ್ತಿ ತೋರ್ಪಡಿಸಿದ್ದಾರೆ. ಸ್ವತಃ ಜನಶಿಕ್ಷಣ ಟ್ರಸ್ಟ್ ವತಿಯಿಂದ ಕೂಡಾ ತನ್ನ ಕಚೇರಿ ಕಟ್ಟಡದ ಸುತ್ತಮುತ್ತ ಇಂಗುಗುಂಡಿ ಗಳನ್ನು ನಿರ್ಮಿಸಲಾಗಿದೆ. ಗ್ರಾಪಂ ಕಟ್ಟಡದ ಸುತ್ತಮುತ್ತ, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಪ್ರಾರ್ಥನಾ ಸ್ಥಳಗಳು ಸೇರಿದಂತೆ ಜಾಗ ಲಭ್ಯ ಇರುವಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ನೀರನ್ನು ಇಂಗಿಸುವ ಕಾರ್ಯ ಇದಾಗಿದೆ. ನರಿಂಗಾನದಲ್ಲಿ 1,087 ಕುಟುಂಬಗಳಿದ್ದು, 11 ಅಂಗನವಾಡಿ ಕೇಂದ್ರಗಳು, ಐದು ಶಾಲೆಗಳು, ಐದು ಮಸೀದಿ, ಒಂದು ಚರ್ಚ್, ಒಂದು ಭಜನಾ ಮಂದಿರ, ಒಂದು ದೇವಸ್ಥಾನ ಹಾಗೂ ಎರಡು ದೈವಸ್ಥಾನಗಳಿವೆ. ‘‘ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದ ಟ್ಯಾಂಕ್‌ರಗಳ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ಎದುರಾಗಿತ್ತು. ಇದಕ್ಕಾಗಿ ಪರ್ಯಾಯ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಯಿತು. ಕಲ್ಲಕೋಡಿ ಮತ್ತು ನರಿಂಗಾನ ಶಾಲೆಗಳ ಬೋರ್‌ವೆಲ್‌ಗಳನ್ನು ಮರುಪೂರಣಗೊಳಿಸುವ ಕಾರ್ಯವನ್ನು ಗ್ರಾಪಂ ಕೈಗೆತ್ತಿಕೊಂಡಿದೆ. ಇದೀಗ ಇಂಗು ಗುಂಡಿಗಳು ಕೂಡಾ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ’’ ಎನ್ನುತ್ತಾರೆ ನರಿಂಗಾನ ಗ್ರಾಪಂ ಅಧ್ಯಕ್ಷ ಇಸ್ಮಾಯೀಲ್. ನರಿಂಗಾನದ ಪ್ರೌಢಶಾಲಾ ಶಿಕ್ಷಕ ಸಂತೋಷ್ ಅಂತರ್ಜಲ ಹೆಚ್ಚಳದ ಅಗತ್ಯತೆ ಬಗ್ಗೆ ಸಾಕ್ಷಚಿತ್ರವೊಂದನ್ನು ನಿರ್ಮಿಸಿದ್ದು, ಆ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವನ್ನು ಮಾಡುತ್ತಿದ್ದಾರೆ.
ಇಂಗುಗುಂಡಿಗಳಿಂದ ಜೀವಜಲ ರಕ್ಷಣೆ ಹೇಗೆ?
ಹಿಂದಿನ ಕಾಲದಲ್ಲಿ ಭತ್ತದ ಗದ್ದೆಗಳು, ಮರಗಿಡಗಳಿಂದಾಗಿ ಮಳೆ ನೀರು ಇಂಗಿ ಭೂಮಿ ಸೇರುತ್ತಿತ್ತು. ಇದರಿಂದ ಭೂಮಿಯಲ್ಲಿ ನೀರಿನ ಒರತೆ ಹೆಚ್ಚು ತ್ತಿತ್ತು. ಇಂದು ಬೃಹತ್ ಕಟ್ಟಡಗಳು, ಕಾಂಕ್ರಿಟ್ ರಸ್ತೆಗಳಿಂದಾಗಿ ಮಳೆ ನೀರು ಮನೆಯ ಸುತ್ತಮುತ್ತಲಿನ ಭೂಮಿಗೆ ಇಂಗುವ ಅವಕಾಶವಿಲ್ಲದೆ ಚರಂಡಿಗಳ ಮೂಲಕ ಹರಿದು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಸುಮಾರು 3 ಅಡಿ ಉದ್ದ, ಒಂದೂವರೆ ಅಡಿ ಅಗಲದ ಗುಂಡಿಗಳನ್ನು ತೆಗೆದರೆ ಮಳೆಗಾಲದಲ್ಲಿ ನೀರು ಗುಂಡಿಯ ಮೂಲಕ ಭೂಮಿ ಸೇರುತ್ತದೆ. ಇದು ಅಂತರ್ಜಲ ಹೆಚ್ಚಿ, ಭೂಮಿಯ ನೀರಿನ ಮಟ್ಟವನ್ನೂ ಹೆಚ್ಚಿಸಲಿದೆ.
-ಶೀನ ಶೆಟ್ಟಿ, ನಿರ್ದೇಶಕರು, ಜನಶಿಕ್ಷಣ ಟ್ರಸ್ಟ್







