6,000 ಕೋಟಿ ರೂ.ವೌಲ್ಯದ ಆಸ್ತಿ ಜಪ್ತಿಗೆ ನಿರ್ಧಾರ
ಮುಂಬೈ, ಆ.7: ಮದ್ಯ ದೊರೆ ವಿಜಯ ಮಲ್ಯ ಅವರ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿ ನಿರ್ದೇಶನಾಲಯ ಈಗಾಗಲೇ ಮಲ್ಯ ಅವರ ಕಂಪೆನಿಗಳಿಗೆ ಸೇರಿದ ಆರು ಸಾವಿರ ಕೋಟಿ ರೂಪಾಯಿ ವೌಲ್ಯದ ಆಸ್ತಿಗಳನ್ನು ಪತ್ತೆ ಮಾಡಿದ್ದು, ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದೆ.
ಹಣಕಾಸು ವಂಚನೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅನ್ವಯ ಎರಡನೆ ಸುತ್ತಿನ ಜಪ್ತಿ ಕಾರ್ಯಕ್ಕೆ ಪ್ರಕ್ರಿಯೆಯನ್ನೂ ಆರಂಭಿಸ ಲಾಗಿದೆ. ಅಪರಾಧ ದಂಡಸಂಹಿತೆ ಕಾಯ್ದೆಯ ಅನ್ವಯ ಜಾರಿಗೊಳಿಸಿದ ಸಮನ್ಸ್‌ಗೆ ಕೂಡಾ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಮಲ್ಯ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ದೇಶನಾಲಯ ಮುಂದಾಗಿದೆ.ತ್ತೆ ಇಟ್ಟಿದ್ದ ಕೆಲ ಷೇರುಗಳು, ಇದಕ್ಕೆ ಸಂಬಂಧಿಸಿದ ಮಲ್ಯ ಹಾಗೂ ಅವರ ಕುಟುಂಬಕ್ಕೆ ಸೇರಿದ ಚರ ಮತ್ತು ಸ್ಥಿರ ಆಸ್ತಿಗಳನ್ನೂ ಗುರುತಿಸಲಾಗಿದೆ. ಪ್ರಕರಣದಲ್ಲಿ ತನಿಖೆಯನ್ನು ಇನ್ನಷ್ಟು ವಿಸ್ತರಿಸಿ ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲೂ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
ಮಲ್ಯ ಅವರ ಬಳಿಕ ಪ್ರಕರಣದಲ್ಲಿ ಹೆಸರಿಸಲಾದ ಇತರ ವ್ಯಕ್ತಿಗಳ ವಿರುದ್ಧವೂ ಇಂಥದ್ದೇ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿವೆ. ಈ ಬಗ್ಗೆ ವಿವರಗಳನ್ನು ನೀಡುವಂತೆ ಎಲ್ಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ನಿರ್ದೇಶನಾಲಯ ಇದರ ಜೊತೆಗೆ ಈಗಾಗಲೇ, ಘೋಷಿತ ಅಪರಾಧಿ ಎಂಬ ಆದೇಶವನ್ನು ಹೊರಡಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಭಾರತ-ಬ್ರಿಟನ್ ಎಂಎಎಲ್‌ಟಿ ಒಪ್ಪಂದಕ್ಕೆ ಅನುಗುಣವಾಗಿ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಮಾಡಲು ಈ ಪ್ರಸ್ತಾವನೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.
ಮಲ್ಯ ವಿರುದ್ಧ ಪಿಎಂಎಲ್‌ಎ ಕಾಯ್ದೆ ಅನ್ವಯ ಜಾಮೀನು ರಹಿತ ವಾರಂಟ್ ಸೇರಿದಂತೆ ಹಲವು ಬಂಧನ ವಾರಂಟ್‌ಗಳು ಬಾಕಿ ಇರುವುದರಿಂದ ಅವರನ್ನು ಘೋಷಿತ ಅಪರಾಧಿ ಎಂದು ಆದೇಶಿಸುವಂತೆ ಕೋರಿ ಕಳೆದ ಜೂನ್‌ನಲ್ಲಿ ನಿರ್ದೇಶನಾಲಯ ಮನವಿ ಸಲ್ಲಿಸಿತ್ತು. ಕೆಲ ತಿಂಗಳ ಹಿಂದೆ ನಿರ್ದೇಶನಾಲಯ ಮಲ್ಯ ಅವರಿಗೆ ಸೇರಿದ್ದ 1,411 ಕೋಟಿ ರೂಪಾಯಿ ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು.
ಪಿಎಂಎಲ್‌ಎ ತನಿಖೆಗೆ ಮಲ್ಯ ಅವರ ಖುದ್ದು ಹಾಜರಿಯನ್ನು ನಿರ್ದೇಶನಾಲಯ ಬಯಸಿದ್ದು, ಇದಕ್ಕೆ ಎಲ್ಲ ಅಗತ್ಯ ಪ್ರಯತ್ನಗಳನ್ನೂ ನಡೆಸಿದೆ. ಇಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದ ಹಣವನ್ನು ಮಲ್ಯ ತಮ್ಮ ವಿದೇಶಿ ವಹಿವಾಟಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪವೂ ಇದೆ. ಮಲ್ಯ ಅವರನ್ನು ಬ್ರಿಟನ್‌ನಿಂದ ಗಡೀಪಾರು ಮಾಡುವ ಸಲುವಾಗಿ ಭಾರತ-ಬ್ರಿಟನ್ ಕಾನೂನು ನೆರವು ಒಪ್ಪಂದದ ಜಾರಿಗೂ ನಿರ್ದೇಶನಾಲಯ ಮನವಿ ಮಾಡಿದೆ.







