ಕೋಲಾರದಲ್ಲಿ ಯೋಧ ರಾಜೇಶ್ ಅಂತ್ಯಸಂಸ್ಕಾರ

ಕೋಲಾರ, ಆ.7: ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್ ವೀರ ಯೋಧ ಕೆ.ಆರ್.ರಾಜೇಶ್ ಅವರ ಮೃತ ದೇಹವು ಇಂದು ಮುಂಜಾನೆ ಕಿತ್ತಾಂಡೂರು ಗ್ರಾಮಕ್ಕೆ ಆಗಮಿಸಿದ್ದು, ಅಂತ್ಯಕ್ರಿಯೆಯು ಜಿಲ್ಲಾಡಳಿತದಿಂದ ಸರಕಾರದ ಸಕಲ ಗೌರವದೊಂದಿಗೆ ಮೃತರ ತೋಟದಲ್ಲಿ ನೆರವೇರಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತಹಶೀಲ್ದಾರ್ ಎನ್.ವಿಜಯಣ್ಣರವರು ಶನಿವಾರವೇ ಗ್ರಾಮಕ್ಕೆ ಭೇಟಿ ನೀಡಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಸಿದ್ದರು. ರಾಜೇಶ್ ಅವರ ಮೃತದೇಹವು ಶನಿವಾರ ಮಧ್ಯರಾತ್ರಿ ಕಿತ್ತಂಡೂರಿನ ಗ್ರಾಮಕ್ಕೆ ಆಗಮಿಸಿತು. ಮೃತದೇಹವನ್ನು ಕಂಡ ರಾಜೇಶ್ ತಂದೆ ರಾಮಕೃಷ್ಣಪ್ಪ(ರಾಮಣ್ಣ), ತಾಯಿ ರಾಮಕ್ಕ ಹಾಗೂ ಸಹೋದರರಾದ ವೆಂಕಟಾಚಲಪತಿ, ಮನೋ ಹರ್ ಮತ್ತು ಬಂಧು ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತರ ಶವದ ಪೆಟ್ಟಿಗೆಯ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಿ ಬ್ಯಾಂಡ್‌ಸೆಟ್‌ನೊಂದಿಗೆ ಅಂತ್ಯ ಸಂಸ್ಕಾರದ ಸ್ಥಳದವರೆಗೆ ಮೆರವಣಿಗೆ ಮೂಲಕ ತೆರಳಿದ ನಂತರ ಮೂರು ಸುತ್ತಿನ ಗುಂಡು ಹಾರಿಸುವ ಮೂಲಕ ಸರಕಾರಿ ಗೌರವವನ್ನು ಸಲ್ಲಿಸಲಾಯಿತು. ಅಂತ್ಯ ಸಂಸ್ಕಾರವನ್ನು ಮೃತರ ಕುಟುಂಬದವರ ಸಂಪ್ರದಯದಂತೆ ನೆರವೇರಿಸಲಾಯಿತು.
ಕುಟುಂಬಕ್ಕೆ ರಾಜೇಶ್ ಆಧಾರ: ಕಿತ್ತಂಡೂರಿನ ರಾಮಕೃಷ್ಣಪ್ಪ(ರಾಮಣ್ಣ) ಮತ್ತು ರಾಮಕ್ಕ ದಂಪತಿ 3 ನೆ ಮಗನಾಗಿರುವ ರಾಜೇಶ್ ಸುಗಟೂರು ಸಬರಮತಿ ಶಾಲೆಯಲ್ಲಿ ಎಸೆಸೆಲ್ಸಿಯ ವರೆಗೆ ವ್ಯಾಸಂಗ ಮಾಡಿ ನಂತರ ಕೆ.ಜಿ.ಎಫ್‌ನಲ್ಲಿ ಐಟಿಐ ಪೂರ್ಣಗೊಳಿಸಿದರು. ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ದಿಸೆಯಲ್ಲಿ ಮೂರು ವರ್ಷಗಳ ಹಿಂದೆಯಷ್ಟೇ ಸಿಆರ್‌ಪಿಎಫ್‌ಗೆ ಸೇರ್ಪಡೆಯಾಗಿದ್ದರು. ಕಡು ಬಡತನದ ಬೇಗೆಯಲ್ಲಿದ್ದ ಕುಟುಂಬಕ್ಕೆ ರಾಜೇಶ್ ಕಳುಹಿಸುತ್ತಿದ್ದ ವೇತನದ ಹಣವೇ ಆರ್ಥಿಕವಾಗಿ ಆಧಾರವಾಗಿತ್ತು.
ರಾಜೇಶ್ ಹಿರಿಯ ಸಹೋದರ ಆಟೊ ಚಾಲಕನಾಗಿದ್ದು, ಕಿರಿಯ ಸಹೋದರ ಮನೋಹರ ಕಾರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುಟುಂಬಕ್ಕೆ ಗ್ರಾಮದಲ್ಲಿ ಒಂದು ಮನೆ ಮತ್ತು ಆರ್ಧ ಎಕರೆ ಜಮೀನು ಹೊರತುಪಡಿಸಿದರೆ ಬೇರೆ ಯಾವ ಆಸ್ತಿಪಾಸ್ತಿಗಳಿಲ್ಲ. ತಂದೆ ರಾಮ ಕೃಷ್ಣಪ್ಪಜೀವನೋಪಾಯಕ್ಕೆ ಧ್ವನಿವರ್ಧಕ ರಿಪೇರಿಯ ಸಣ್ಣ ಅಂಗಡಿ ಯನ್ನು ಇಟ್ಟು ಕೊಂಡಿದ್ದರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮನೆ ಗೃಹ ಪ್ರವೇಶಕ್ಕೆ ಬಂದಿದ್ದ ರಾಜೇಶ್ ಒಂದು ರಜೆ ಕಳೆದು 2 ತಿಂಗಳ ಹಿಂದೆ ನಡೆದ ಜಾತ್ರೆಯನ್ನು ಮುಗಿಸಿಕೊಂಡು ಪುನಃ ಕರ್ತವ್ಯಕ್ಕೆ ತೆರಳಿದ್ದರು.
ಗೌರವ ಸಲ್ಲಿಕೆ: ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೃತ ರಾಜೇಶ್ ಬಗ್ಗೆ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡರು. ಎರಡು ನಿಮಿಷ ವೌನಾಚರಣೆ ನೆರವೇರಿಸಿ ಗೌರವ ಸಲ್ಲಿಸಲಾಯಿತು. ಅಂತ್ಯ ಸಂಸ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್, ಶಾಸಕ ವರ್ತೂರು ಪ್ರಕಾಶ್, ಮಾಜಿ ಶಾಸಕ ವೆಂಕಟ ಶಿವಾರೆಡ್ಡಿ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಎಸ್ಪಿ ದಿವ್ಯಾ ಗೋಪಿ ನಾಥ್ ಸೇರಿದಂತೆ ಹಲವು ಗಣ್ಯರು ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಸಾವಿನಲ್ಲಿ ಮೂಡಿರುವ ಗೊಂದಲ
ರಾಜೇಶ್ ಸಾವಿಗೆ ಸ್ವಷ್ಟವಾದ ಕಾರಣ ಗೊತ್ತಾಗದಿರುವುದು ಗೊಂದ ಲಕ್ಕೆ ಕಾರಣವಾಗಿದೆ. ಶುಕ್ರವಾರ ರಾತ್ರಿ ಮಿಲಿಟರಿ ಕಮಾಂಡ್ ಕಚೇರಿಯಿಂದ ಕರೆಯೊಂದು ಬಂದು ವಿದ್ಯುತ್ ಪ್ರವರ್ತಕದ ಬಳಿ ರಾಜೇಶ್ ಅಸ್ವಸ್ಥಗೊಂಡು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದರು. ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಅದರೆ, ಈಗಾಗಲೇ ದೂರದರ್ಶನ ಮಾಧ್ಯಮಗಳಲ್ಲಿ ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಭಯೋತ್ಪಾದಕರ ದಾಳಿಯಿಂದ ರಾಜೇಶ್ ಮೃತಪಟ್ಟರೆಂದು ಪ್ರಸಾರವಾಗಿದೆ. ಇದು ರಾಜೇಶ್ ಅವರ ಸಾವಿನ ಬಗ್ಗೆ ಗೊಂದಲಕ್ಕೆ ಕಾರಣವಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಡಾ.ದಿವ್ಯಾಗೋಪಿನಾಥ್ ಅವರು ಈ ಬಗ್ಗೆ ತಮಗೆ ಯಾವುದೇ ಖಚಿತ ಮಾಹಿತಿ ಬಂದಿಲ್ಲವೆಂದು ತಿಳಿಸಿದ್ದಾರೆ.







