ಮತ್ತೆರಡು ದೇಹ ಪತ್ತೆ; ಸಾವಿನ ಸಂಖ್ಯೆ 26ಕ್ಕೆ: ಮಹಾಡ್ ದುರಂತ
ಮುಂಬೈ, ಆ.7: ಮುಂಬೈ- ಗೋವಾ ಹೆದ್ದಾರಿಯ ಮಹಾಡ್ ಎಂಬಲ್ಲಿ ಸೇತುವೆ ಕುಸಿದು ಉಂಟಾದ ದುರಂತದಲ್ಲಿ ಮಡಿದವರ ಶೋಧ ಕಾರ್ಯ ಸತತ ನಾಲ್ಕನೆ ದಿನವಾದ ರವಿವಾರವೂ ಮುಂದುವರಿದಿದ್ದು, ಮತ್ತೆರಡು ಶವಗಳು ಪತ್ತೆಯಾಗಿವೆ. ಇದರಿಂದ ದುರಂತದಲ್ಲಿ ಮಡಿದವರ ಸಂಖ್ಯೆ 26ಕ್ಕೆ ಹೆಚ್ಚಿದಂತಾಗಿದೆ.
ಕಾರ್ಯಾಚರಣೆಯಲ್ಲಿ ಮತ್ತೆರಡು ಶವಗಳು ಪತ್ತೆಯಾಗಿದ್ದು, ಮೃತಪಟ್ಟ ಎಲ್ಲರನ್ನೂ ಗುರುತಿಸಲಾಗಿದೆ ಎಂದು ರಾಜ್ಯ ವಿಕೋಪ ನಿರ್ವಹಣೆ ಘಟಕದ ನಿರ್ದೇಶಕ ಸುಹಾಸ್ ದಿವಾಸೆ ಹೇಳಿದ್ದಾರೆ.ರಂಭದಲ್ಲಿ 42 ಜನ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿತ್ತು. ಇದುವರೆಗೂ ಅಧಿಕೃತವಾಗಿ ಯಾವ ಮಾಹಿತಿ ಯಾಗಲೀ, ಸ್ಪಷ್ಟತೆಯಾಗಲೀ ಇಲ್ಲ. ನಾಲ್ಕು ಮಂದಿ ಪ್ರಯಾಣಿಸುತ್ತಿದ್ದ ಹೋಂಡಾ ಸಿಟಿ ಕಾರೊಂದು ಕೂಡಾ ನದಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಇದು ಖಚಿತವಾದ ಬಳಿಕವಷ್ಟೇ 42 ಮಂದಿ ಕಣ್ಮರೆಯಾಗಿದ್ದಾರೆ ಎಂದು ಖಚಿತಪಡಿಸಬಹುದು. ಆದರೆ ಸದ್ಯಕ್ಕೆ 38 ಮಂದಿ ಕಾಣೆಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ರಾಷ್ಟ್ರೀಯ ವಿಕೋಪ ಸ್ಪಂದನೆ ಪಡೆ ಹಾಗೂ ಕರಾವಳಿ ಕಾವಲು ಪಡೆ ಅಧಿಕಾರಿಗಳಿಗೆ ಇದುವರೆಗೆ ಕೇವಲ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನ ನಾಮಫಲಕವಷ್ಟೇ ಸಿಕ್ಕಿದ್ದು, ಇದರಲ್ಲಿ ಕಾಯ್ದಿರಿಸಿದೆ ಎಂಬ ಬರಹವಷ್ಟೇ ಇದೆ. ಎಲೆಕ್ಟ್ರಾನಿಕ್ ಸೆನ್ಸಾರ್, ಸೋನಾರ್ ಸಾಧನ ಹಾಗೂ ಬೃಹತ್ ಅಯಸ್ಕಾಂತಗಳನ್ನು ಬಳಸಿ ನೀರಿನಲ್ಲಿ ಲೋಹದ ಸಾಧನಗಳನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ.
ಸಾವಿತ್ರಿ ನದಿ ಪ್ರವಾಹ 100 ವರ್ಷ ಹಳೆಯ ಸೇತುವೆಯನ್ನು ಕೊಚ್ಚಿಕೊಂಡು ಹೋಗಿರುವುದರಿಂದ ಎರಡು ಬಸ್ಸುಗಳು ಹಾಗೂ ಒಂದು ಕಾರು ನೀರಿನಲ್ಲಿ ಮುಳುಗಿದೆ ಎನ್ನಲಾಗಿದೆ. ಮಹಾಬಲೇಶ್ವರ ನದಿಪಾತ್ರದ ಪ್ರದೇಶದಲ್ಲಿ ವ್ಯಾಪಕ ಮಳೆ ಬಿದ್ದ ಹಿನ್ನೆಲೆಯಲ್ಲಿ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಿತ್ತು.
ರಾಷ್ಟ್ರೀಯ ವಿಕೋಪ ಸ್ಪಂದನೆ ಪಡೆ ದುರ್ಘಟನೆ ನಡೆದ 40 ಕಿ.ಮೀ. ದೂರದವರೆಗೂ ನದಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ರಾಯಗಡ, ರತ್ನಗಿರಿ ಹಾಗೂ ರಾಜ್ಯ ಹೆದ್ದಾರಿ ಪೊಲೀಸರೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ನಾಪತ್ತೆಯಾದವರಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳ ಜನ ಸೇರಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ.