ಇರುಮುಗಂ ಚಿತ್ರದಲ್ಲಿ ವಿಕ್ರಂ ವಿಭಿನ್ನ ಮುಖ

ತಮಿಳು ನಟ ವಿಕ್ರಂ ನಟನೆಗೆ ದಕ್ಷಿಣ ಭಾರತೀಯರಷ್ಟೇ ಅಲ್ಲ, ಬಾಲಿವುಡ್ ಕೂಡ ಮಾರು ಹೋಗಿದೆ. ಹತ್ತು ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಇವರದ್ದು. ಈಗಾಗಲೇ ತಮ್ಮ ‘ಪಿತಾಮಗನ್’ನ ವಿಭಿನ್ನ ದೈತ್ಯ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಬುದ್ಧಿಮಾಂದ್ಯ, ಹುಚ್ಚ, ಪೊಲೀಸ್ ಅಧಿಕಾರಿ, ರೌಡಿ ಹೀಗೆ ಯಾವ ಪಾತ್ರಕ್ಕೂ ಸಲ್ಲುವವರು ವಿಕ್ರಂ. ಇದೀಗ ಅವರ ‘ಇರುಮುಗಂ’ ಚಿತ್ರ ಸುದ್ದಿಯಲ್ಲಿದೆ.
ಈ ಚಿತ್ರ ವಿಕ್ರಂ ಕಾರಣಕ್ಕಾಗಿ ವಿಶೇಷವಾ ದುದು. ಇಲ್ಲಿ ಅವರು ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ರಂ ವಿರುದ್ಧ ಖಳನಾಗಿ ಕಾಣಿಸಿಕೊಳ್ಳಲಿರುವವರೂ ಸ್ವತಃ ವಿಕ್ರಂ ಅವರೇ ಆಗಿದ್ದಾರೆ. ಪ್ರಧಾನ ಪಾತ್ರವಾಗಿರುವ ಅಖಿಲನ್ ರಾ ಏಜೆಂಟ್. ಮಲೇಶ್ಯಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಬಾಂಬ್ ಸ್ಫೋಟ ನಡೆಸಿದ ಭಯೋತ್ಪಾದಕನ ಬೆನ್ನು ಹತ್ತುವ ಹೊಣೆಗಾರಿಕೆ ಈತನ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲೇ ಅವರಿಗೆ ಮುಖಾಮುಖಿಯಾಗುವ ವಿಲನ್ ತನ್ನನ್ನೇ ಹೋಲುವ ಇನ್ನೋರ್ವ. ಈ ಎರಡು ಮುಖಗಳ ಸಂಘರ್ಷವೇ ಚಿತ್ರದ ಕತೆ.

ಚಿತ್ರದಲ್ಲಿ ವಿಲನ್ ಪಾತ್ರವೇ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಚಿತ್ರದ ಟ್ರೇಲರ್‌ಗಳು ಬಿಡುಗಡೆಗೊಂಡಿವೆ. ವಿಲನ್ ಹಾಲಿವುಡ್‌ನ ‘ಬ್ಯಾಟ್‌ಮ್ಯಾನ್’ ಚಿತ್ರದ ಜೋಕರ್‌ನಂತೆ ಕಾಣಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಅದೇ ಚಿತ್ರದ ಇನ್ನೊಂದೆರಡು ವಿಲನ್‌ಗಳನ್ನೂ ಹೋಲುತ್ತಾನೆ. ಹಾಗೆಯೇ ತೃತೀಯ ಲಿಂಗಿಯಂತೆ ನಡಿಗೆಯ ಶೈಲಿಯನ್ನೂ ಹೊಂದಿದ್ದಾನೆ. ಒಟ್ಟಿನಲ್ಲಿ ನಾಯಕನಿಗಿಂತ ವಿಲನ್ ಪಾತ್ರವೇ ವಿಭಿನ್ನವಾಗಿದೆ. ತೆಲುಗಿನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಕುರಿತಂತೆ ವಿಕ್ರಂ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇತ್ತೀಚಿನ ಚಿತ್ರಗಳು ನಿರೀಕ್ಷಿಸಿದ ಯಶಸ್ಸನ್ನು ಕಾಣದೇ ಇರುವುದೂ ಇದಕ್ಕೆ ಒಂದು ಕಾರಣವಾಗಿರಬಹುದು. ಹಾಗೆಯೇ ವಿಕ್ರಂ ಅವರ ಹೊಸ ಚಿತ್ರ ‘ಸಾಮಿ-2’ಕ್ಕೂ ವೇದಿಕೆ ಸಿದ್ಧವಾಗುತ್ತಿದೆ. 2004ರಲ್ಲಿ ಬಿಡುಗಡೆಗೊಂಡ ‘ಸಾಮಿ’ ಒಬ್ಬ ರೌಡಿ ಗುಣದ ಪೊಲೀಸ್ ಅಧಿಕಾರಿಯ ಕಥೆ. ಇದೀಗ ಆ ಚಿತ್ರದ ಮುಂದುವರಿದ ಭಾಗವನ್ನು ಹೊರತರಲು ನಿರ್ದೇಶಕರು ಸಿದ್ಧತೆ ನಡೆಸುತ್ತಿದ್ದಾರೆ. ಅದೇನೇ ಇರಲಿ, ‘ಇರುಮುಗಂ’ ಚಿತ್ರ ವಿಕ್ರಂ ಅವರ ಭವಿಷ್ಯದ ನಿಜ ಮುಖವನ್ನು ಹೊರಗೆ ತರಲಿದೆ.







