ಸದ್ಗೃಹಿಣಿ ಗೌತಮಿಯ ಕಾಲ

ಒಂದು ಕಾಲದ ಆಕರ್ಷಣೆಯ ಹೆಸರು ಗೌತಮಿ. ಗಂಭೀರ ಪಾತ್ರಗಳಲ್ಲೂ, ಚೆಲ್ಲು ಪಾತ್ರಗಳಲ್ಲೂ ದಕ್ಷಿಣ ಭಾರತದಲ್ಲಿ ಗೌತಮಿ ಗುರುತಿಸಲ್ಪಡುತ್ತಿದ್ದರು. ಮಲಯಾಳಂನ ‘ಹಿಸ್ ಹೈನಸ್ ಅಬ್ದುಲ್ಲಾ’ ಚಿತ್ರದಲ್ಲಿ ಗೌತಮಿ ಮಿಂಚಿದ್ದರು. ಕನ್ನಡದಲ್ಲಿ ರವಿಚಂದ್ರನ್ ಜೊತೆಗೆ ನಟಿಸಿ ಗಮನ ಸೆಳೆದಿದ್ದರು. ಆದರೆ ಕಾಲ ಎಲ್ಲರ ಮೇಲೂ ಎರಗಿ ಬಿಡುತ್ತದೆ. ನಟಿಯರ ಪಾಲಿಗಂತೂ ಕಾಲ ಬಹುದೊಡ್ಡ ಶತ್ರು. ಅವರು ನಾಯಕ ನಟರಿಗಿಂತ ಬೇಗ ಬೆಳ್ಳಿತೆರೆಯ ಬದಿಗೆ ಸರಿಯಬೇಕಾಗುತ್ತದೆ. ಹಾಗೆ ಸರಿದರೂ ಕೆಲವು ನಟಿಯರು ತಮ್ಮ ಪ್ರತಿಭೆಯ ಬಲದಿಂದ ಮೇಲೇರಲು ಹವಣಿಸುವುದಿದೆ. ಇತ್ತೀಚೆಗೆ ಶ್ರೀದೇವಿ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದಲ್ಲಿ ಕಾಣಿಸಿಕೊಂಡು ಸುದ್ದಿಯಾದರು. ಮಲಯಾಳಂನಲ್ಲಿ ಮಂಜುವಾರ್ಯರ್ ಕೂಡ ನಾಯಕಿ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಂಡು ತನ್ನ ಕಾಲ ಮುಗಿಯಲಿಲ್ಲ ಎನ್ನುವುದನ್ನು ಸಾಬೀತು ಪಡಿಸಿದರು. ಇದೀಗ ಗೌತಮಿ ಕೂಡ ಮೂರು ಭಾಷೆ ಗಳಲ್ಲಿ ಹೊರ ಬರುವ ಚಿತ್ರವೊಂದರಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ.
ಕಳೆದ ವರ್ಷ ‘ಪಾಪನಾಶಂ’ ಚಿತ್ರದಲ್ಲಿ ಕಮಲ್ ಹಾಸನ್ ಜೊತೆಗೆ ಮುಖ್ಯ ಪಾತ್ರದಲ್ಲಿ ಅದರಲ್ಲೂ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ದೃಶ್ಯಂ’ ಚಿತ್ರದ ರಿಮೇಕ್ ಇದಾಗಿತ್ತು. ಈ ಬಾರಿ ಮತ್ತೆ ಅವರಿಗೆ ಗೃಹಿಣಿಯ ಪಾತ್ರವೊಂದು ಒಲಿದು ಬಂದಿದೆ. ಇದರಲ್ಲಿ ಮೋಹನ್ ಲಾಲ್ ಜೊತೆಗೆ ಅವರು ನಟಿಸಲಿರುವುದು ಗಮನಾರ್ಹವಾಗಿದೆ. ತಮಿಳಲ್ಲಿ ‘ನಮಧು’, ತೆಲುಗಲ್ಲಿ ‘ಮನಮಂದ’ ಮತ್ತು ಮಲಯಾಳಂನಲ್ಲಿ ‘ವಿಸ್ಮಯಂ’ ಹೆಸರಿನಲ್ಲಿ ಆಗಸ್ಟ್ 5ರಂದು ಚಿತ್ರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದೆ.
ಗೌತಮಿ ಅವರು ಈ ಪಾತ್ರದ ಮೇಲೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರು ಈ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಚಿತ್ರ ಬದುಕಿನ ಎರಡನೆ ಅಧ್ಯಾಯವೊಂದಕ್ಕೆ ಕಾಲಿಡಲಿದ್ದಾರೆ ಎನ್ನುವುದು ಅವರ ಅನಿಸಿಕೆ.







