13-14: ಬಪ್ಪನಾಡು ಕ್ಷೇತ್ರದಲ್ಲಿ ತುಳು ಸಮ್ಮೇಳನ
ಮಂಗಳೂರು, ಆ.8: ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯು 4 ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆ.13 ಮತ್ತು 14ರಂದು ಬಪ್ಪನಾಡು ದೇವಸ್ಥಾನದ ವಠಾರದಲ್ಲಿ ತುಳು ಸಮ್ಮೇಳನ ಆಯೋಜಿಸಿದ್ದು, ಈ ಸಂದರ್ಭ ಫಿಲಂ ಅವಾರ್ಡ್ ಕಾರ್ಯಕ್ರಮ ಜರಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿಂದು ಟೈಮ್ಸ್ ಆಫ್ ಕುಡ್ಲ ಅವಾರ್ಡ್ ಸಮಿತಿ ಅಧ್ಯಕ್ಷ ನಿಟ್ಟೆ ಶಶಿಧರ ಶೆಟ್ಟಿ ತಿಳಿಸಿದ್ದಾರೆ.
ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾರ್ಗದರ್ಶನದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ತುಳು ಭಾಷೆಗೆ ಕೊಡುಗೆ ನೀಡಿದ ತುಳು ಚಲನಚಿತ್ರರಂಗಕ್ಕೆ ಗೌರವ ನೀಡಲು ಸುಮಾರು 4 ವರ್ಷಗಳಲ್ಲಿ ಸಾಧನೆಗೈದ ತುಳು ಚಿತ್ರರಂಗದ ಗಣ್ಯರನ್ನು ಮತ್ತು ನಿರ್ಮಾಪಕರನ್ನು ಗೌರವಿಸಲಾಗುವುದು. 2015ರಲ್ಲಿ ಬಿಡುಗಡೆಯಾದ ತುಳು ಚಿತ್ರರಂಗದ ಕಲಾವಿದರನ್ನು ಪ್ರಶಸ್ತಿಗೆ ಸೂಚಿಸಲಾಗಿದ್ದು, ಕಲಾವಿದರ ಆಯ್ಕೆ ಪ್ರಕ್ರಿಯೆ ಕೇವಲ ಮೊಬೈಲ್ ಮೆಸೇಜ್ ಮೂಲಕವೇ ನಡೆಯಲಿದೆ. ಪ್ರೇಕ್ಷಕರಿಗೆ ಈಗಾಗಲೇ ಮೆಸೇಜ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಹರ್ಷ ರೈ, ಸಿರಾಜ್ ಮತ್ತು ರಕ್ಷಿತ್ ಕೆ. ಬಂಗೇರ ಉಪಸ್ಥಿತರಿದ್ದರು.





