ಟರ್ಕಿ ಸೇನಾ ವಿಫಲ ಕ್ರಾಂತಿಗೆ ಭಾರತದ ಕನೆಕ್ಷನ್?

ಮುಂಬೈ, ಆ.9: ಟರ್ಕಿಯಲ್ಲಿ ಕಳೆದ ತಿಂಗಳು ನಡೆದ ಸೇನಾ ವಿಫಲ ಕ್ರಾಂತಿಗೆ ಮೂಲ ಕಾರಣ ಎನ್ನಲಾದ ಫತೇಉಲ್ಲಾ ಅವರ ಭಯೋತ್ಪಾದಕ ಸಂಘಟನೆಯ ಕಚೇರಿಗಳು ಮುಂಬೈನಲ್ಲಿದ್ದು, ತಕ್ಷಣ ಅದನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರ ಆಗ್ರಹಿಸಿದೆ.
ಈ ಸಂಬಂಧ ಭಾರತ ಸರಕಾರ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಸಲ್ಲಿಸಿ, ಮುಂಬೈನಲ್ಲಿ ಮತ್ತು ದೇಶಾದ್ಯಂತ ಇರಬಹುದಾದ ಈ ಜಾಲವನ್ನು ಮಟ್ಟಹಾಕಲು ಮನವಿ ಮಾಡಿದ್ದೇವೆ ಎಂದು ಟರ್ಕಿಯ ಕೌನ್ಸೆಲ್ ಜನರಲ್ ಎರ್ದಾಲ್ ಸಾಬ್ರಿ ಎರ್ಗೆನ್ ಪ್ರಕಟಿಸಿದ್ದಾರೆ.
ಈ ಜಾಲದ ಜೊತೆ ಸಂಪರ್ಕ ಹೊಂದಿರುವ ಎಲ್ಲವನ್ನೂ ಮಚ್ಚಬೇಕು. ಈ ಜಾಲದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇದು ಸಿನಿಕತನದ ಮನೋಭಾವ ಹೊಂದಿರುವ ಅಕ್ರಮ ಜಾಲ ಎಂದು ಅವರು ಹೇಳಿದ್ದಾರೆ.
ಈ ಜಾಲದ ಜೊತೆ ಸಂಪರ್ಕ ಹೊಂದಿದ ಸಂಸ್ಥೆಗಳು ಮುಂಬೈನಲ್ಲಿವೆ. ನಮ್ಮ ರಾಯಭಾರಿ ಈಗಾಗಲೇ ಈ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಅಧಿಕಾರಿಗಳಿಗೆ ಈ ಬಗ್ಗೆ ಮೊದಲೇ ಮಾಹಿತಿ ಇದೆ ಎನ್ನುವುದು ನಮ್ಮ ನಂಬಿಕೆ ಎಂದು ಸ್ಪಷ್ಟಪಡಿಸಿದರು. ಮುಂಬೈ ಹಾಗೂ ದೇಶದ ಇತರೆಡೆಗಳಲ್ಲಿ ಈ ಜಾಲ ಇರುವ ಬಗ್ಗೆ ನಾವು ಸಾಕಷ್ಟು ದಾಖಲೆ ಹಾಗೂ ಪುರಾವೆಗಳನ್ನೂ ನೀಡಿದ್ದೇವೆ. ಇದು ಅಧಿಕೃತ ಭಯೋತ್ಪಾದಕ ಸಂಘಟನೆ ಅಲ್ಲದಿದ್ದರೂ ಜಾಲವನ್ನು ಹೊಂದಿದೆ ಎಂದು ವಿವರಿಸಿದ್ದಾರೆ.





