ರಿಯೋ : ಇತಿಹಾಸ ಸೃಷ್ಟಿಸಿದ ದೀಪಾ ಕರ್ಮಾಕರ್‌ಗೆ ‘ಗೃಹ ಬಂಧನ’ !

ರಿಯೋ, ಆ.9: : ರಿಯೋ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿ ಇತಿಹಾಸ ಸೃಷ್ಟಿಸಿರುವ ಭಾರತದ ಜಿಮ್ನಾಸ್ಟಿಕ್ಸ್ ತಾರೆ ತ್ರಿಪುರಾದ ದೀಪಾ ಕರ್ಮಕರ್ ಆಗಸ್ಟ್ 14 ರಂದು ನಡೆಯುವ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲು ಸರ್ವ ತಯಾರಿ ನಡೆಸುತ್ತಿರುವಂತೆಯೇ ಆಕೆಯ ಕೋಚ್ ಬಿಶ್ವೇಶ್ವರ್ ನಂದಿ ಆಕೆಗೆ ವಸ್ತುಶಃ ಗೃಹಬಂಧನ ವಿಧಿಸಿದ್ದಾರೆ.
ದೀಪಾ ಇಂದು ತಮ್ಮ 23ನೆ ಜನ್ಮ ದಿನವನ್ನು ಆಚರಿಸಲಿದ್ದರೂ ಆಕೆ ತನ್ನ ಹೆತ್ತವರ ಹೊರತಾಗಿ ಬೇರೆ ಯಾರಿಂದಲೂ ಶುಭಾಶಯ ಸ್ವೀಕರಿಸುವುದಿಲ್ಲ. ‘‘ಆಕೆಯ ಮೊಬೈಲ್ ಫೋನ್‌ನ ಸಿಮ್ ಕಾರ್ಡನ್ನು ನಾನು ತೆಗೆದಿರಿಸಿದ್ದೇನೆ. ಆಕೆಯ ಹೆತ್ತವರು ಮಾತ್ರ ಆಕೆಯೊಂದಿಗೆ ಮಾತನಾಡುತ್ತಾರೆ. ಆಕೆಯ ಗಮನ ಬೇರೆಡೆ ಹರಿಯುವುದು ನನಗೆ ಬೇಕಿಲ್ಲ’’ ಎಂದು ಕಳೆದ 16 ವರ್ಷದಿಂದ ಆಕೆಯ ಕೋಚ್ ಆಗಿರುವ ನಂದಿ ಹೇಳುತ್ತಾರೆ. ಸದ್ಯಕ್ಕೆ ಆಕೆಯ ಜೊತೆ ಆಕೆಯ ರೂಮ್ ಮೇಟ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಮಹಿಳಾ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯ್ ಚಾನು ಹಾಗೂ ಆಕೆಯ ಕೋಚ್ ನಂದಿ ಮಾತ್ರ ಇರುತ್ತಾರೆ.
‘‘ಆಕೆ ಕಠಿಣ ಅಭ್ಯಾಸ ಮಾಡಲು ಹೆಚ್ಚಿನ ಸಮಯ ವ್ಯಯಿಸುವುದರಿಂದ ಆಕೆಯ ಸ್ನೇಹಿತೆಯರ ಬಳಗ ಕೂಡ ಚಿಕ್ಕದು. ನಾನು ಅಭ್ಯಾಸದ ನಡುವೆ ಆಕೆಗೆ ನೀಡುವ ಚಿಕ್ಕ ಬ್ರೇಕ್‌ಗಳ ನಡುವೆ ಆಕೆ ಕೇವಲ ತನ್ನ ಹೆತ್ತವರೊಂದಿಗೆ ಮಾತನಾಡಲು ಅವಕಾಶವಿದೆ’’ ಎಂದು ನಂದಿ ಹೇಳುತ್ತಾರೆ.
ದೀಪಾ ನಿರಾಯಾಸವಾಗಿ ಮಾಡುವ ಅಪಾಯಕಾರಿ ಪ್ರೊದುನೊವಾ ವಾಲ್ಟ್ ಆಕೆಗೆ ಸಾಕಷ್ಟು ಹೆಸರು ತಂದಿದೆಯೆಂಬುದು ನಿರ್ವಿವಾದ. ‘‘ಜಿಮ್ನಾಸ್ಟಿಕ್ಸ್ ನಲ್ಲಿ ಪ್ರತಿಯೊಂದು ಹಂತದಲ್ಲೂ ಅಪಾಯವಿದೆ. ಆದರೆ ದೀಪಾ ಪ್ರೊದುನೊವಾದಲ್ಲಿ ಸಂಪೂರ್ಣ ಪರಿಣತಿ ಹೊಂದಿದ್ದಾರೆ’’ಎಂದು ನಂದಿ ವಿವರಿಸುತ್ತಾರೆ.
ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿರುವ ವೇಟ್ ಲಿಫ್ಟಿಂಗ್ ಕೋಚ್ ಒಬ್ಬರ ಪುತ್ರಿಯಾಗಿರುವ ದೀಪಾ ಜಿಮ್ನಾಸ್ಟಿಕ್ಸ್ ಅಭ್ಯಾಸವನ್ನು ಆಕೆ ಮೂರು ವರ್ಷದವಳಿರುವಾಗಲೇ ಎಸ್‌ಎಐ ಕೋಚ್ ಆಗಿರುವ ನಂದಿ ಅವರ ಪತ್ನಿ ಸುಮಾ ಬಳಿ ಆರಂಭಿಸಿದ್ದರು.
ಸುಮಾ ನಂತರ ದೀಪಾರನ್ನು ತಮ್ಮ ಪತಿ ಬಳಿ ಕರೆ ತಂದ ನಂತರ ಅವರೇ ಆಕೆಗೆ ಕಳೆದ 16 ವರ್ಷದಿಂದ ತರಬೇತಿ ನೀಡುತ್ತಿದ್ದಾರೆ.
ಆಗಸ್ಟ್ 14 ರಂದು ಸ್ಥಳೀಯ ಕಾಲಮಾನ ಅಪರಾಹ್ನ 2:47ಕ್ಕೆ ಜಿಮ್ನಾಸ್ಟಿಕ್ಸ್ ಅಂತಿಮ ಸುತ್ತು ನಡೆಯಲಿದೆ. ‘‘ಆಕೆ ಪದಕ ಗೆದ್ದರೆ ಅದು ಭಾರತಕ್ಕೆ ಸ್ವಾತಂತ್ರ್ಯ ದಿನದ ಉಡುಗೊರೆಯಾಗಲಿದೆ.’’ಎಂದು ಆಶಾವಾದದಿಂದ ಹೇಳುತ್ತಾರೆ ನಂದಿ.







