ಗುಜರಾತ್ ದಲಿತ ಆಂದೋಲನದಲ್ಲಿ ಗಮನ ಸೆಳೆಯುತ್ತಿರುವ ಘೋಷಣೆಗಳು, ಜೋಕುಗಳು

ಅಹ್ಮದಾಬಾದ್, ಆ.9: ಗುಜರಾತ್‌ನ ಉನಾ ಗ್ರಾಮದಲ್ಲಿ ಇತ್ತೀಚೆಗೆ ದಲಿತ ಯುವಕರ ಮೇಲೆ ಸ್ವಘೋಷಿತ ಗೋರಕ್ಷಕರು ನಡೆಸಿದ ಅಮಾನುಷ ದೌರ್ಜನ್ಯ ರಾಜ್ಯಾದ್ಯಂತ ದಲಿತರ ಪ್ರತಿಭಟನೆಗಳಿಗೆ ಕಾರಣವಾಗಿದೆ. ದಲಿತ ಹೋರಾಟಗಾರ ಜಿಗ್ನೇಶ್ ಮೇವನಿ ಅಹ್ಮದಾಬಾದ್‌ನಿಂದ ಉನಾಗೆ 10 ದಿನಗಳ ಯಾತ್ರೆ ಕೈಗೊಂಡಿದ್ದಾರಲ್ಲದೆ ದಲಿತರು ತಮ್ಮ ವಿರುದ್ಧದ ದೌರ್ಜನ್ಯದ ವಿರುದ್ಧ ಸಿಡಿದೇಳುವಂತೆ ಪ್ರೇರೇಪಿಸುತ್ತಿದ್ದಾರೆ.
ತರುವಾಯ ಗುಜರಾತ್ ರಾಜ್ಯದ ಈ ದಲಿತ ಆಂದೋಲನದಲ್ಲಿ ದಲಿತ ನಾಯಕರ ಹಾಗೂ ಕಾರ್ಯಕರ್ತರ ಹಲವಾರು ಘೋಷಣೆಗಳು ಹಾಗೂ ಜೋಕುಗಳು ಸಾಕಷ್ಟು ಗಮನ ಸೆಳೆಯುತ್ತಿವೆ.
ಇಲ್ಲಿವೆ ಕೆಲವು ಸ್ಯಾಂಪಲ್‌ಗಳು
1. ‘‘ಗಾಯೆ ನು ಪುಚ್ಡು ತಾಮೆ ರಖೋ, ಆಮ್ನೆ ಅಮಾರಿ ಜಮೀನ್ ಆಪೊ’’ (ದನದ ಕಥೆಯನ್ನು ನೀವಿಟ್ಟುಕೊಳ್ಳಿ, ನಮಗೆ ನಮ್ಮ ಭೂಮಿ ನೀಡಿ)
ಇಲ್ಲಿ ದನದ ಕಥೆ ದಲಿತರ ಪಾರಂಪರಿಕ ವೃತ್ತಿಯಾದ ಸತ್ತ ದನಗಳ ಚರ್ಮ ಸುಲಿಯುವುದು ಹಾಗೂ ಅವುಗಳ ಕಳೇಬರಗಳನ್ನು ವಿಲೇವಾರಿಗೊಳಿಸುವುದನ್ನು ಪ್ರತಿನಿಧಿಸುತ್ತದೆ. ಉನಾ ಘಟನೆಯ ನಂತರ ದಲಿತರು ತಮ್ಮ ವೃತ್ತಿಯನ್ನು ಬಹಿಷ್ಕರಿಸಿ ಜೀವನೋಪಾಯಕ್ಕಾಗಿ ಭೂಮಿಗೆ ಬೇಡಿಕೆಯಿಟ್ಟಿದ್ದಾರೆ.
2. ‘‘ಲಾಥ್ ಲೇ ಕರ್ ಜಾಯೇಂಗೆ, ಜಮೀನ್ ಖುಲ್ಲಿ ಕರೇಂಗೆ’’ (ನಮ್ಮ ಭೂಮಿಯನ್ನು ಪಡೆಯಲು ನಾವು ದೊಣ್ಣೆಗಳೊಂದಿಗೆ ಹೋಗುತ್ತೇವೆ)
ಜುಲೈ 11 ರ ಸಮಾವೇಶಕ್ಕಾಗಿ ಉನಾ ದಲಿತ್ ಅತ್ಯಾಚಾರ್ ಲಡಾಯಿ ಸಮಿತಿ ಸಿದ್ಧಪಡಿಸಿದ್ದ ಒಂದೇ ಒಂದು ಘೋಷಣೆ ಇದಾಗಿತ್ತು. ಸಮಿತಿ ಹಾಗೂ ಜನ ಸಂಘರ್ಷ್ ಸಮಿತಿ ಎಂಬ ನಾಗರಿಕ ಹಕ್ಕುಗಳ ಸಂಘಟನೆದಲಿತರ ಭೂಮಿ ಹಕ್ಕುಗಳಿಗಾಗಿ ಗುಜರಾತ್ ನಲ್ಲಿ ಹೋರಾಡುತ್ತಿವೆ.
3. ‘ಗುಜರಾತ್ ಮಾಡೆಲ್ ಫೇಲ್, ಫೇಲ್’
ಈ ಘೋಷಣೆಯನ್ನು ಕಳೆದೆರಡು ವರ್ಷಗಳಿಂದ ಗುಜರಾತ್ ರಾಜ್ಯದಲ್ಲಿ ಆಯೋಜಿಸಲಾಗುವ ಪ್ರತಿಯೊಂದು ಪ್ರತಿಭಟನೆಯಲ್ಲೂ ಮೊಳಗಿಸಲಾಗುತ್ತಿದೆೆ. ಮುಸ್ಲಿಮರು ಹಾಗೂ ದಲಿತ ಸಮುದಾಯದ ಸುರಕ್ಷತೆಗೆ ಏನೂ ಮಾಡದ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಪ್ರತಿಭಟನಾಕಾರರು ಬಾರಿ ಬಾರಿ ಪ್ರಶ್ನಿಸಿದ್ದಾರೆ.
4.‘‘ಗಾಯೆ ಜಿಸ್ಕೀ ಮಾತಾ ಹೇ ಸಾಂದ್ ಉಸ್ಕಾ ಬಾಪ್ ಹೇ’’(ಗೋವನ್ನು ತನ್ನ ತಾಯಿಯೆಂದು ತಿಳಿಯುವವನು ಎತ್ತನ್ನು ತನ್ನ ತಂದೆಯೆಂದು ತಿಳಿಯಬೇಕು)
ಜಿಗ್ನೇಶ್ ಮೇವನಿಯವರ ನೇತೃತ್ವದ ಯಾತ್ರೆ ಧೋಲ್ಕಾ ತೆಹ್ಸಿಲ್‌ಗೆ ಸೋಮವಾರ ಆಗಮಿಸಿದಾಗ ಗ್ರಾಮಸ್ಥರು ಕೂಗಿದ ಘೋಷಣೆ ಇದಾಗಿದೆ. ದಾದ್ರಿ ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭುಗಿಲೆದ್ದಿದ್ದಾಗ ಗೋ ರಕ್ಷಕರು ಎತ್ತಿಗೂ ಪೌರಾಣಿಕ ಸಂಬಂಧ ಕಲ್ಪಿಸಬೇಕೆಂದು ಸಂದೇಶವೊಂದರಲ್ಲಿ ಯಾರೋ ಒಬ್ಬರು ಹೇಳಿದ್ದರು.
5. ‘‘ಹಮೇ ಚಾಹಿಯೇ ಆಜಾದಿ’’ (ನಮಗೆ ಬೇಕು ಸ್ವಾತಂತ್ರ್ಯ)
ಹರ್ಯಾಣಾದ ದಲಿತ ಕಾರ್ಯಕರ್ತೆ ಮೀನಾ ಮಶಾಲ್ ಈ ಘೋಷಣೆಯನ್ನು ಮೊದಲು ರವಿವಾರದಂದು ಕೂಗಿದ್ದರು. ಕೆಲವೇ ಕೆಲವು ಕ್ಷಣಗಳಲ್ಲಿ ಹಳ್ಳಿಯ ನೂರಾರು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಅಲ್ಲಿ ಸೇರಿದ್ದರು. ಜೆಎನ್‌ಯು ಹೋರಾಟದ ಸಂದರ್ಭದಲ್ಲೂ ಈ ಘೋಷಣೆ ಜನಪ್ರಿಯವಾಗಿದೆ. ಗುಜರಾತ್‌ನಲ್ಲಿ ದಲಿತರು ಜಾತೀಯತೆಯಿಂದ ಸ್ವಾತಂತ್ರದ ಬೇಡಿಕೆಯಿಟ್ಟಿದ್ದಾರೆ.







