ಸುಳ್ಯ: ನಾಗಪಟ್ಟಣ ಶಾಲೆಯಲ್ಲಿ ಕಳ್ಳತನ
.jpg)
ಸುಳ್ಯ, ಆ.9: ನಾಗಪಟ್ಟಣ ಶಾಲೆಯಲ್ಲಿ ಕಳವು ನಡೆದಿದೆ. ಕಚೇರಿಯ ಬೀಗ ಮುರಿದು ಕಪಾಟನ್ನು ಶೋಧಿಸಿದ ಕಳ್ಳರು ಒಂದು ಮಾನಿಟರ್‌ನ್ನು ಕದ್ದೊಯ್ದಿದ್ದಾರೆ.
ಸೋಮವಾರ ರಾತ್ರಿ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಶಾಲಾ ಮುಖ್ಯ ಶಿಕ್ಷಕಿಯ ಗಮನಕ್ಕೆ ಬಂದಿದೆ. ಶಾಲಾ ಕಚೇರಿಯ ಬೀಗ ಮುರಿದು ಮಾನಿಟರ್ ಒಂದನ್ನು ಕಳವು ಮಾಡಲಾಗಿದೆ. ಕಪಾಟಿನ ಬೀಗ ಮುರಿದು ಒಳಗಿದ್ದ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಆದರೆ ಯಾವುದೇ ದಾಖಲೆಗಳನ್ನು ಕಳವು ಮಾಡಲಾಗಿಲ್ಲ. ಅಕ್ಷರ ದಾಸೋಹ ಕೊಠಡಿಯ ಹಿಂದಿನ ಕಿಟಿಕಿಯನ್ನು ಮುರಿಯುವ ಪ್ರಯತ್ನ ಮಾಡಲಾಗಿದ್ದು, ಇದರಲ್ಲಿ ಕಳ್ಳರು ವಿಫಲರಾಗಿದ್ದಾರೆ.
ಘಟನೆ ಕುರಿತು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಿಇಒ ಕೆಂಪಲಿಂಗಪ್ಪ, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಶಾಲಾ ಆವರಣದಲ್ಲಿ ಅನಧಿಕೃತ ರಸ್ತೆ ನಿರ್ಮಿಸಿ ಸಂಜೆ ವೇಳೆ ವಾಹನಗಳನ್ನು ನಿಲುಗಡೆ ಮಾಡುವುದು, ಜಗಲಿಯಲ್ಲಿ ಗುಟ್ಕಾ ತಿಂದು ಉಗುಳುವುದು, ಮದ್ಯ ಸೇವನೆ ಮಾಡಿ ಎಲ್ಲೆಂದರಲ್ಲಿ ಬಾಟಲಿಗಳನ್ನು ಬಿಸಾಡುವುದು ಇತ್ಯಾದಿ ಚಟುವಟಿಕೆ ನಡೆಯುತ್ತಿದ್ದು, ಅನಧಿಕೃತ ರಸ್ತೆ ಬಂದ್ ಮಾಡಿದ್ದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ದಾಂಧಲೆ ನಡೆಸಿರಬೇಕೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.







