ಮೌಢ್ಯ ನಿಷೇಧ ಕಾಯ್ದೆ ಮಂಡನೆಗೆ ಸಿದ್ಧತೆ: ಕಾಗೋಡು ತಿಮ್ಮಪ್ಪ

ಬೆಂಗಳೂರು, ಆ.9: ರಾಜ್ಯ ಸರಕಾರವು ವೌಢ್ಯ ನಿಷೇಧ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ವೌಢ್ಯ ನಿಷೇಧ ಕಾಯ್ದೆಯ ಕರಡು ಪರಿಷ್ಕರಣೆಗೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೌಢ್ಯ ನಿಷೇಧ ಕಾಯ್ದೆಯ ಈಗಿನ ಸ್ವರೂಪದಲ್ಲಿ ಜಾರಿ ಮಾಡುವುದು ಕಷ್ಟ. ಆದುದರಿಂದ, ಕಾಯ್ದೆಯನ್ನು ಪರಿಷ್ಕರಿಸಲಾಗುತ್ತಿದ್ದು, ಒಂದು ತಿಂಗಳಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು. ಆನಂತರ ಸಚಿವ ಸಂಪುಟದ ಒಪ್ಪಿಗೆ ಪಡೆದು ಸದನದಲ್ಲಿ ಮಂಡಿಸಲಾಗುವುದು ಎಂದು ಅವರು ಹೇಳಿದರು.
ಪ್ರಾಯೋಗಿಕವಾಗಿ ಯಾವುದನ್ನು ಅನುಷ್ಠಾನಗೊಳಿಸಲು ಸಾಧ್ಯವೋ ಅಂತಹ ಅಂಶಗಳನ್ನು ಕಾಯ್ದೆಯಲ್ಲಿ ಅಳವಡಿಸಲಾಗುವುದು. ಇಂದಿನ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರವೇ ಮತ್ತೊಂದು ಸಭೆಯನ್ನು ಕರೆದು ಕರಡು ಮಸೂದೆಗೆ ಒಂದು ರೂಪ ನೀಡಲಾಗುವುದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಕೆಲವು ಆಚರಣೆಗಳು ನಮ್ಮ ಬದುಕಿನಲ್ಲಿ ಸೇರಿಕೊಂಡಿವೆ. ಹಾಗಾಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕಾಯ್ದೆಯ ಅಂತಿಮ ಕರಡು ತಯಾರಾಗಲಿದೆ. ಭಾರತದಂತಹ ಸಾಮಾಜಿಕ ಪರಿಸ್ಥಿತಿಯ ದೇಶದಲ್ಲಿ ಮೌಢ್ಯ ನಿಷೇಧ ಅಷ್ಟು ಸುಲಭವಲ್ಲ. ಕಾಯ್ದೆಗೂ ಮೊದಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.
ಸಮಾಜದಲ್ಲಿರುವ ವೌಢ್ಯಕಗಳ ವಿರುದ್ಧದ ನನ್ನ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ನಾನು ಆರಂಭದಿಂದಲು ವೌಢ್ಯಚಾರಣೆಗಳ ವಿರೋಧಿಯಾಗಿದ್ದೇನೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.







