ಟ್ರಂಪ್ ಅಧ್ಯಕ್ಷರಾದರೆ ಅಪಾಯ : ಅಮೆರಿಕದ ರಾಷ್ಟ್ರೀಯ ಭದ್ರತಾ ಪರಿಣತರ ಎಚ್ಚರಿಕೆ

ವಾಶಿಂಗ್ಟನ್, ಆ. 9: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಪಾಯಕಾರಿ ಅಧ್ಯಕ್ಷರಾಗುತ್ತಾರೆ ಹಾಗೂ ದೇಶದ ಭದ್ರತೆಯನ್ನು ಅಪಾಯಕ್ಕೊಡ್ಡುತ್ತಾರೆ ಎಂಬುದಾಗಿ ರಿಪಬ್ಲಿಕನ್ ಪಕ್ಷದವರೇ ಆದ 50 ಮಂದಿ ರಾಷ್ಟ್ರೀಯ ಭದ್ರತಾ ಪರಿಣತರ ಗುಂಪೊಂದು ಹೇಳಿದೆ.
ಮಾಜಿ ಉನ್ನತ ದರ್ಜೆಯ ಬೇಹುಗಾರರು ಮತ್ತು ರಾಜತಾಂತ್ರಿಕರನ್ನೊಳಗೊಂಡ ಈ ಗುಂಪಿನ ಹೇಳಿಕೆ ಟ್ರಂಪ್‌ಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.
ಆದರೆ, ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಟ್ರಂಪ್, ಜಗತ್ತು ಇಷ್ಟೊಂದು ಜಟಿಲ ಯಾಕೆ ಆಗಿದೆ ಎಂಬುದಕ್ಕೆ 'ಈ ವಾಶಿಂಗ್ಟನ್ ಕುಲೀನರು' ಉತ್ತರ ಹುಡುಕಬೇಕು ಎಂದು ಹೇಳಿದ್ದಾರೆ.
''ನಮ್ಮ ಪೈಕಿ ಯಾರೂ ಟ್ರಂಪ್‌ಗೆ ಮತ ಹಾಕುವುದಿಲ್ಲ. ವಿದೇಶ ನೀತಿಯನ್ನು ಗಮನದಲ್ಲಿಟ್ಟು ಹೇಳುವುದಾದರೆ, ಟ್ರಂಪ್‌ಗೆ ಅಮೆರಿಕದ ಅಧ್ಯಕ್ಷ ಹಾಗೂ ಪ್ರಧಾನ ಸೇನಾಪತಿ ಆಗುವ ಅರ್ಹತೆಯಿಲ್ಲ. ವಾಸ್ತವವಾಗಿ, ಅವರೊಬ್ಬ ಅಪಾಯಕಾರಿ ಅಧ್ಯಕ್ಷರಾಗುತ್ತಾರೆ ಹಾಗೂ ನಮ್ಮ ದೇಶದ ಭದ್ರತೆ ಮತ್ತು ಹಿತಾಸಕ್ತಿಯನ್ನು ಅಪಾಯಕ್ಕೀಡು ಮಾಡುತ್ತಾರೆ ಎನ್ನುವುದು ನಮಗೆ ಮನವರಿಕೆಯಾಗಿದೆ'' ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ರಾಷ್ಟ್ರೀಯ ಭದ್ರತಾ ಪರಿಣತರ ಗುಂಪು ಹೇಳಿದೆ.
''ಮುಖ್ಯವಾಗಿ ಟ್ರಂಪ್‌ರಲ್ಲಿ ಗುಣ, ವೌಲ್ಯಗಳು ಮತ್ತು ಅಧ್ಯಕ್ಷರಾಗುವ ಅನುಭವವಿಲ್ಲ. ಅವರು ಮುಕ್ತ ಜಗತ್ತಿನ ನಾಯಕರಾಗಿ ಅಮೆರಿಕದ ನೈತಿಕತೆಯನ್ನು ದುರ್ಬಲಗೊಳಿಸುತ್ತಾರೆ'' ಎಂದು ಅದು ತಿಳಿಸಿದೆ.
ಈ ಪರಿಣತರು ರಿಚರ್ಡ್ ನಿಕ್ಸನ್‌ರಿಂದ ಹಿಡಿದು ಜಾರ್ಜ್ ಡಬ್ಲು. ಬುಶ್‌ವರೆಗಿನ ರಿಪಬ್ಲಿಕನ್ ಅಧ್ಯಕ್ಷರ ಅವಧಿಯಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ವಹಿಸಿದವರಾಗಿದ್ದಾರೆ.





