ಮೂಡುಬಿದಿರೆಯ ವೈದ್ಯರಿಗೆ ಪ್ರಧಾನಿ ಮೋದಿ ಬುಲಾವ್
ರಸ್ತೆ ಸುರಕ್ಷತೆ ಬಗ್ಗೆ ಕಾಳಜಿ

ಮೂಡುಬಿದಿರೆ, ಆ.9: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್‌ನಲ್ಲಿ ಕಳೆದ ವರ್ಷ ‘ರಸ್ತೆ ಸುರಕ್ಷತೆ’ ಕುರಿತಾಗಿ ಮೂಡುಬಿದಿರೆಯ ಡಾ.ಪ್ರಸನ್ನ ಕಾಕುಂಜೆ ಅವರು ವ್ಯಕ್ತಪಡಿಸಿದ ಕಾಳಜಿಗೆ ಮೋದಿ ಅವರು ಪ್ರತಿಕ್ರಿಯೆ ನೀಡಿ ಗಮನ ಸೆಳೆದು ಸುದ್ದಿಯಾಗಿದ್ದು, ‘ಮನ್ ಕೀ ಬಾತ್’ ಮತ್ತು ‘ಮೈ ಗೌ’ನ ದ್ವಿತೀಯ ವಾರ್ಷಿಕೋತ್ಸವಕ್ಕೆ ಡಾ.ಪ್ರಸನ್ನ ಅವರನ್ನು ಮೋದಿಯವರು ಹೊಸದಿಲ್ಲಿಗೆ ಬರಮಾಡಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಆ.6ರಂದು ಹೊಸದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಸಮಾರಂಕ್ಕೆ ಪ್ರಸನ್ನರನ್ನು ಆಹ್ವಾನಿಸಲಾಗಿತ್ತು. ಮೂಡಬಿದಿರೆಗೆ ಸಮೀಪದ ಮಿತ್ತಬಿರಾವುನಲ್ಲಿ ‘ಕಾಕುಂಜೆ ಆಯುರ್ವೇದ ವೆಲ್‌ನೆಸ್ ಹೋಂ’ ನಡೆಸುತ್ತಿರುವ ಡಾ. ಪ್ರಸನ್ನ ಕಾಕುಂಜೆ ಈ ಬಗ್ಗೆ ಸಂತಸ ವ್ಯಕ್ತಪಡಿಸಿದರು.
‘‘ದೇಶದ ವಿವಿಧ ಬಾಗಗಳಿಂದ ಆರಿಸಲ್ಪಟ್ಟು ರಾಷ್ಟ್ರದ ರಾಜಧಾನಿಗೆ ಆಗಮಿಸಿದ್ದ 1,500 ಮಂದಿ ನಾಗರಿಕರ ಪೈಕಿ ಪ್ರಧಾನಿಯವರ ಭಾಷಣದ ವೇಳೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಅವಕಾಶ ಲಭಿಸಿತ್ತು. ಸರಕಾರ ಮತ್ತು ಪ್ರಜೆಗಳು ಬೇರೆ ಬೇರೆ ಅಲ್ಲ. ಪ್ರಜೆಗಳು ಮುಕ್ತವಾಗಿ ತಮ್ಮ ಆಶಯಗಳನ್ನು ವ್ಯಕ್ತಪಡಿಸಬೇಕು. ಪ್ರಜೆಗಳ ಮನಸ್ಸಿನ ಆಶಯಗಳು ಏನಿವೆ, ಹೇಗಿವೆ ಎಂಬುದನ್ನು ಸರಕಾರ ತಿಳಿದುಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸಿದಾಗ ದೇಶ ಖಂಡಿತ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ. ಪ್ರಜ್ಞಾವಂತ ನಾಗರಿಕರೆಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ’’ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.







