ಮಾರ್ಗಸೂಚಿ ಉಲ್ಲಂಘಿಸುವ ಮೀನುಗಾರಿಕಾ ಬೋಟ್‌ಗಳ ಜಪ್ತಿ : ಡಿಸಿ ನಕುಲ್

ಕಾರವಾರ, ಆ.9: ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಮೀನುಗಾರಿಕೆ ನಡೆಸುವ ಬೋಟ್‌ಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಮೀನುಗಾರರ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು.
ಮೀನುಗಾರಿಕಾ ಬೋಟ್‌ಗಳು ಕಡ್ಡಾಯವಾಗಿ ಕಲರ್ ಕೋಡಿಂಗ್ ಮಾಡಿರಬೇಕು ಎಂದು ಸೂಚಿಸಿದ್ದರೂ, ಇನ್ನೂ ಕೆಲವು ಬೋಟ್‌ಗಳು ಮಾಡಿಲ್ಲ. ಇದೇ ರೀತಿ ಎಲ್ಲ ಮೀನುಗಾರರ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಿಲ್ಲದ ಕಾರಣ ಸುರಕ್ಷತಾ ಕ್ರಮಗಳಿಗೆ ಅಡ್ಡಿ ಉಂಟಾಗುತ್ತಿದೆ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಕಲರ್ ಕೋಡಿಂಗ್ ಮಾಡಿರದ ಬೋಟ್‌ಗಳನ್ನು ಹಾಗೂ 350 ಅಶ್ವಶಕ್ತಿಗಿಂತ ಹೆಚ್ಚಿನ ಇಂಜಿನ್ ಸಾಮರ್ಥ್ಯ ಬಳಸಿ ಮೀನುಗಾರಿಕೆ ನಡೆಸುವ ಬೋಟ್‌ಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಬೇಕು. ಬೈತ್‌ಕೋಲ್ ಬಂದರಿನಲ್ಲಿ ಇಂತಹ ಬೋಟ್‌ಗಳು ಇದ್ದರೆ ಪರಿಶೀಲನೆ ನಡೆಸಿ, ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದರು. ಇದೇ ರೀತಿ ಮೀನುಗಾರಿಕೆ ಸಂದರ್ಭದಲ್ಲಿ 350ಅಶ್ವಶಕ್ತಿಗಿಂತ ಅಧಿಕ ಸಾಮರ್ಥ್ಯದ ಬೋಟ್‌ಗಳು ಹಾಗೂ ಎಲ್‌ಇಡಿ ಬೆಳಕನ್ನು ಹಾಯಿಸಿ ಮೀನುಗಾರಿಕೆ ನಡೆಸುವ ಬೋಟ್‌ಗಳು ಕಂಡು ಬಂದರೆ 1077 ಕಂಟ್ರೋಲ್ ರೂಂ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಒದಗಿಸಬಹುದು. ಕಲರ್ ಕೋಡಿಂಗ್ ಮಾಡದ ಬೋಟ್‌ಗಳಿಗೆ ಸಬ್ಸಿಡಿ ಡೀಸೆಲ್ ನೀಡುವುದನ್ನು ಸ್ಥಗಿತಗೊಳಿಸುವಂತೆ ತಿಳಿಸಿದರು.
ಲೈಫ್ ಜಾಕೆಟ್: ನಾಡ ದೋಣಿಯ ಮೀನುಗಾರರಿಗೆ ಮೀನುಗಾರಿಕೆ ಇಲಾಖೆ ವತಿಯಿಂದ ಲೈಫ್ ಜಾಕೆಟ್‌ಗಳನ್ನು ಒದಗಿಸಲಾಗುತ್ತಿದೆ. ಮೀನುಗಾರಿಕೆ ತೆರಳುವ ವೇಳೆ ಕಡ್ಡಾಯವಾಗಿ ಅದನ್ನು ಹಾಕಿಕೊಳ್ಳಬೇಕು. ಇಲಾಖೆಯಲ್ಲಿ ಸುಮಾರು ಒಂದು ಸಾವಿರದಷ್ಟು ಲೈಫ್ ಜಾಕೆಟ್‌ಗಳು ಲಭ್ಯವಿದ್ದು, ನೋಂದಣಿ ಮಾಡಿಸಿದ ಮೀನುಗಾರರು ಇದನ್ನು ಪಡೆದುಕೊಳ್ಳಬಹುದಾಗಿದೆ. ಲೈಫ್ ಜಾಕೆಟ್ ಲಭ್ಯವಿಲ್ಲದಿದ್ದರೂ, ಗಾಳಿ ತುಂಬಿದ ಟ್ಯೂಬ್, ಟಯರ್‌ಗಳನ್ನು ಮೀನುಗಾರಿಕೆ ಸಂದರ್ಭದಲ್ಲಿ ತೆಗೆದುಕೊಂಡು ಹೋಗಬೇಕು. ಟ್ರಾಲ್ ಮತ್ತು ಪರ್ಸೀನ್ ಬೋಟ್‌ಗಳಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಬೋಟ್‌ಗಳ ಮಾಲಕರು ಕಡ್ಡಾಯವಾಗಿ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು. ಒದಗಿಸದೆ, ಅಸುರಕ್ಷಿತವಾಗಿ ಮೀನುಗಾರಿಕೆಗೆ ತೆರಳಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಬಾಲಕಾರ್ಮಿಕರನ್ನು ಮೀನುಗಾರಿಕೆಗೆ ಬಳಸಿಕೊಳ್ಳಬಾರದು ಎಂದು ಅವರು ಎಚ್ಚರಿಕೆ ನೀಡಿದರು.
ಕೋಸ್ಟ್‌ಗಾರ್ಡ್‌ನವರು ಅಪಾಯದಲ್ಲಿ ಸಿಲುಕುವ ಮೀನುಗಾರರ ರಕ್ಷಣೆಗೆ ತಕ್ಷಣ ಆಗಮಿಸಬೇಕು. ಇದಕ್ಕಾಗಿ ಅಪಾಯ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನಿರಂತರ ಗಸ್ತು ನಡೆಸಬೇಕು. ನೌಕಾಪಡೆಯವರು ಸಮರಭ್ಯಾಸ ನಡೆಸುವ ಪೂರ್ವದಲ್ಲಿ ಕನಿಷ್ಠ ಒಂದು ವಾರ ಮೊದಲು ಈ ಕುರಿತು ಮಾಹಿತಿ ಒದಗಿಸಬೇಕು ಎಂದು ಮೀನುಗಾರ ಮುಖಂಡರು ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಮೀನುಗಾರರ ಮುಖಂಡರಾದ ಕೆ.ಟಿ.ತಾಂಡೇಲ್, ಗಣಪತಿ ಮಾಂಗ್ರೆ, ಸದಾನಂದ ಹರಿಕಾಂತ, ಪಿ.ಎಂ. ತಾಂಡೇಲ್ ಸೇರಿದಂತೆ ಗಣ್ಯರು ಹಾಗೂ ಮೀನುಗಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.







