‘ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ’
ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ

ಮಡಿಕೇರಿ, ಆ.9: ತಾಯಂದಿರ ಮರಣ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸುರಕ್ಷಿತ ಮಾತೃತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗರ್ಭಿಣಿಯರು ತಪ್ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯಯುತ ಸಮಾಜಕ್ಕೆ ಕೈಜೋಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ.ಆರ್.ಶ್ರೀರಂಗಪ್ಪಕರೆ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್‌ನಲ್ಲಿ ಮಂಗಳವಾರ ನಡೆದ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗರ್ಭಿಣಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಆರೋಗ್ಯ ಸಹಾಯಕಿಯರನ್ನು ಭೆೇಟಿ ಮಾಡಿ ಹೆಸರು ನೋಂದಾಯಿಸಿಕೊಂಡು ತಾಯಿ ಕಾರ್ಡ್‌ನ್ನು ಪಡೆಯುವಂತಾಗಬೇಕು ಎಂದು ಅವರು ಸಲಹೆ ನೀಡಿದರು. ಸರಕಾರ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜನನಿ ಸುರಕ್ಷಾ ಯೋಜನಾ ಕಾರ್ಯಕ್ರಮ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದರ ಉಪಯೋಗ ಅರ್ಹರಿಗೆ ತಲುಪುವಂತಾಗಬೇಕು ಎಂದು ಡಿಎಚ್‌ಒ ರಂಗಪ್ಪಹೇಳಿದರು. ಆರ್.ಸಿ.ಎಚ್.ಅಧಿಕಾರಿ ಡಾ. ದೇವಿ ಆನಂದ್ ಮಾತನಾಡಿ, ಗರ್ಭಿಣಿಯರು ಆಸ್ಪತ್ರೆಗೆ ತೆರಳಿ ಆರೋಗ್ಯ ಕಾರ್ಡ್ ಪಡೆಯುವುದರ ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಕಾರ್ಡ್ ಪಡೆದು ಸುಮ್ಮನೆ ಇದ್ದರೆ ಸಾಲದು, ಪ್ರತೀ ತಿಂಗಳು ಆಸ್ಪತ್ರೆಗೆ ತೆರಳಿ ತಜ್ಞ ವೈದ್ಯರಿಂದ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಶೇ.20ರಷ್ಟು ಗರ್ಭಿಣಿಯರು ಎಲ್ಲ ರೀತಿಯ ಆರೋಗ್ಯ ಸೌಲಭ್ಯವನ್ನು ಪಡೆಯುತ್ತಾರೆ. ಶೇ.40ರಷ್ಟು ಮಾತ್ರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಆದರೆ ಉಳಿದವರು ಒಂದು ಬಾರಿ ಆಸ್ಪತ್ರೆಗೆ ತೆರಳಿ ಮತ್ತೊಮ್ಮೆ ಆಸ್ಪತ್ರೆ ಕಡೆ ಮುಖ ಮಾಡುವುದಿಲ್ಲ. ಈ ರೀತಿಯಾದರೆ ಸಮಸ್ಯೆಗಳು ಉಂಟಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲಾಸ್ಪತ್ರೆಯ ಡಾ. ಅಝೀಝ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಆರೋಗ್ಯ ಸೌಲಭ್ಯಗಳು ದೊರೆಯಲಿದ್ದು, ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸೌಲಭ್ಯ ಲಭ್ಯವಿಲ್ಲದಿದ್ದಲ್ಲಿ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ಈ ಕಾರ್ಯದಲ್ಲಿ ಯಾವುದೇ ಹೊರೆಯಾಗದಂತೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ವೈದ್ಯ ಡಾ. ಮಂಜುನಾಥ್, ಡಾ. ಎಂ.ಶಿವಕುಮಾರ್, ಡಾ. ಎ.ಸಿ.ಶಿವಕುಮಾರ್ ಮಾತನಾಡಿದರು.





