ಮಗನ ಮೇಲಿನ ಸಿಟ್ಟಿಗೆ ಸೊಸೆ-ಬೀಗತಿಯ ಹತ್ಯೆ
ಥಾಣೆ, ಆ.9: ತನ್ನ ಮಗ ಹೆಂಡತಿಯ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದುದನ್ನು ಸಹಿಸದ 56ರ ಹರೆಯದ ಮಹಿಳೆಯೊಬ್ಬಳು ಸೊಸೆ ಹಾಗೂ ಆಕೆಯ ತಾಯಿಯನ್ನು ಹತ್ಯೆ ಮಾಡಿದ ಪ್ರಕರಣ ಜಿಲ್ಲೆಯ ಮುಂಬ್ರಾ ಪಟ್ಟಣದಲ್ಲಿ ನಡೆದಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ರಶೀದಾ ಅಕ್ಬರಾಲಿ ವಸಾನಿ ಎಂಬ ಈ ಮಹಿಳೆ ನಿನ್ನೆ ಮುಂಬ್ರಾದ ತನ್ನ ಮನೆಯಲ್ಲಿ ಸೊಸೆ ಸಲ್ಮಾ ಮಕ್ದುಂ ವಸಾನಿ(24) ಹಾಗೂ ಬೀಗತಿ, ಕುರ್ಲಾ ನಿವಾಸಿ ಶಮೀಮ್ ಲತೀಫ್ ಶೇಕ್(54) ಎಂಬವರಿಗೆ ಯಾವುದೋ ಮತ್ತು ಬರುವ ಔಷಧ ಬೆರೆಸಿದ ಆಹಾರವನ್ನು ನೀಡಿದ್ದಳು. ಅದನ್ನು ತಿಂದ ಅವರಿಬ್ಬರೂ ಗಾಢ ನಿದ್ದೆಗೆ ಜಾರಿದರು.
ಆ ಬಳಿಕ ರಶೀದಾ ಹರಿತ ಆಯುಧವೊಂದರಿಂದ ಅವರಿಬ್ಬರನ್ನು ತಿವಿದಳು, ಗಂಟಲು ಸೀಳಿದಳು ಹಾಗೂ ಕಿವಿಗಳನ್ನು ಕತ್ತರಿಸಿದಳೆಂದು ಪೊಲೀಸ್ ನಿರೀಕ್ಷಕಿ ಸುಖದಾ ನಾರ್ಕರ್ ತಿಳಿಸಿದ್ದಾರೆ.
ಹತ್ಯೆಗಳನ್ನು ನಡೆಸಿದ ಬಳಿಕ ಆರೋಪಿಯು ನಿನ್ನೆ ರಾತ್ರಿಯೇ ಮುಂಬ್ರಾ ಪೊಲೀಸ್ ಠಾಣೆಗೆ ತೆರಳಿ, ಘಟನೆಯ ಕುರಿತು ಮಾಹಿತಿ ನೀಡಿದ್ದಾಳೆ.
ಅವಳನ್ನು ಬಂಧಿಸಲಾಗಿದ್ದು, ಐಪಿಸಿಯ 302 (ಕೊಲೆ), 328(ಅಪರಾಧ ನಡೆಸುವ ಉದ್ದೇಶದಿಂದ ವಿಷ ನೀಡುವುದು) ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸೂಕ್ತ ಪರಿಚ್ಛೇದಗಳನ್ವಯ ಪ್ರಕರಣ ದಾಖಲಿಸಿದೆಯೆಂದು ನಾರ್ಕರ್ ವಿವರಿಸಿದ್ದಾರೆ. ಸಲ್ಮಾಳ ವಿವಾಹ 4 ವರ್ಷಗಳ ಹಿಂದೆ ರಶೀದಾಳ ಮಗ ಮಕ್ದುಂ ವಸಾನಿ ಎಂಬವನೊಂದಿಗೆ ನಡೆದಿತ್ತು. ದಂಪತಿಗೆ ಇತ್ತೀಚೆಗೆ ಒಂದು ಮಗುವಾಗಿತ್ತು. ಅದರಿಂದಾಗಿ ಶಮೀಮ್ ಮಗಳಿಗೆ ಸಹಾಯಕ್ಕೆಂದು ಬಂದಿದ್ದಳು.





