ಅ.15ರೊಳಗೆ ಸುಧಾರಣಾ ಕ್ರಮಗಳ ಜಾರಿ
ಬಿಸಿಸಿಐಗೆ ಲೋಧಾ ಸಮಿತಿಯ ತಾಕೀತು
ಹೊಸದಿಲ್ಲಿ,ಆ.9: ಸಾಂಸ್ಥಿಕ ಸುಧಾರಣೆಗಳಿಂದ ಹಿಡಿದು ಲಾಭದಾಯಕ ಟಿವಿ ಪ್ರಸಾರ ಹಕ್ಕು ಗಳು ಸೇರಿದಂತೆ ವಿವಿಧ ಗುತ್ತಿಗೆಗಳ ನೀಡಿಕೆ ನೀತಿಗಳ ವರೆಗೆ 15 ಸುಧಾರಣಾ ಕ್ರಮಗಳನ್ನು ಅಕ್ಟೋಬರ್ 15ರೊಳಗೆ ಜಾರಿಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿರುವ ನ್ಯಾ.ಆರ್.ಎಂ.ಲೋಧಾ ಸಮಿತಿಯು ಮಂಗಳ ವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸ್ಪಷ್ಟವಾಗಿ ಸೂಚಿಸಿದೆ.
ಸಮಿತಿಯ ಸೂಚನೆಯಂತೆ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರು ಸಮಿತಿಯ ಸದಸ್ಯರನ್ನು ಭೇಟಿಯಾಗಿದ್ದರು. ಸಮಿತಿಯು ಸಾಂವಿಧಾನಿಕ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ 15 ನಿರ್ದಿಷ್ಟ ಕ್ರಮಗಳನ್ನು ಅ.15ರೊಳಗೆ ಜಾರಿಗೊಳಿಸುವಂತೆ ಬಿಸಿಸಿಐಗೆ ನಿರ್ದಿಷ್ಟ ಗಡುವು ನೀಡಿದೆ. ಈಗಾಗಲೇ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮೊದಲ ಪಾಲನಾ ವರದಿಯನ್ನು ಆ.25ರೊಳಗೆ ಸಮಿತಿಗೆ ಸಲ್ಲಿಸುವುದಾಗಿ ಶಿರ್ಕೆ ತಿಳಿಸಿದ್ದಾರೆ ಎಂದು ಸಮಿತಿಗೆ ನಿಕಟವಾಗಿರುವ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈ ಮೂಲಗಳು, ಸೂಚಿಸಲಾಗಿರುವ ಸುಧಾರಣಾ ಕ್ರಮಗಳು ಸಂಸ್ಥೆಯ ನಿಯಮಾವಳಿಗಳಿಗೆ ತಿದ್ದುಪಡಿ,ರಾಜ್ಯ ಕ್ರಿಕೆಟ್ ಸಂಸ್ಥೆಗಳ ರಚನೆಯ ದಾಖಲೆಗಳು ಮತ್ತು ಗುತ್ತಿಗೆಗಳನ್ನು ನೀಡುವಲ್ಲಿ ಅನುಸರಿಸಲಾಗುತ್ತಿರುವ ನಿಯಮಗಳಿಗೆ ಸಂಬಂಧಿಸಿವೆ ಎಂದು ತಿಳಿಸಿದವು.
ಕೆಲವು ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಸಮಸ್ಯೆಗಳನ್ನು ಶಿರ್ಕೆಯವರು ಸಮಿತಿ ಸದಸ್ಯರ ಗಮನಕ್ಕೆ ತಂದರಾದರೂ,ಸವೋಚ್ಚ ನ್ಯಾಯಾಲಯದ ತೀರ್ಪು ತನ್ನದೇ ಆದ ಗೌರವವನ್ನು ಹೊಂದಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರೆಂದು ಮೂಲಗಳು ತಿಳಿಸಿದವು.
ಬಿಸಿಸಿಐ ಪುನರ್ ಪರಿಶೀಲನಾ ಅರ್ಜಿ ಯೊಂದನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸ ಲಿದೆ ಎಂದು ಶಿರ್ಕೆ ಅವರು ಸಮಿತಿಗೆ ತಿಳಿಸಿದರು.





