ಕಾಶ್ಮೀರವೂ ಸ್ವಾತಂತ್ರದ ಸವಿ ಅನುಭವಿಸಲಿ
ಮೋದಿ ಇಂಗಿತ
ಅಲಿಜಾಪುರ(ಮ.ಪ್ರ.), ಆ.9: ಕಳೆದೊಂದು ತಿಂಗಳಿಂದ ಕಾಶ್ಮೀರವನ್ನು ಸರ್ವನಾಶ ಮಾಡುತ್ತಿರುವ ಬಿಕ್ಕಟ್ಟಿನ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿ ಭಾರತೀಯನೂ ಕಾಶ್ಮೀರವನ್ನು ಪ್ರೀತಿಸುತ್ತಾನೆ. ಪ್ರತಿ ಭಾರತೀಯನೂ ಅನುಭವಿಸುತ್ತಿರುವ ಸ್ವಾತಂತ್ರವನ್ನು ಕಾಶ್ಮೀರವೂ ಅನುಭವಿಸುವುದಕ್ಕೆ ಸಾಧ್ಯವೆಂಬ ಭರವಸೆ ನೀಡಿದ್ದಾರೆ.
ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರ ಕಣಿವೆಯಾದ್ಯಂತ ನಡೆಯುತ್ತಿರುವ ಹಿಂಸಾಚಾರದ ಕುರಿತು ಪ್ರಧಾನಿ ವೌನವಾಗಿದ್ದಾರೆಂದು ವಿಪಕ್ಷಗಳು ಸಂಸತ್ತಿನಲ್ಲಿ ದೂರಿದ್ದವು. ಕಾಶ್ಮೀರದಲ್ಲಿ ತಡೆರಹಿತ ಹಿಂಸಾಚಾರಕ್ಕೆ 59 ಮಂದಿ ಬಲಿಯಾಗಿದ್ದು, 5 ಸಾವಿರ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 3 ಸಾವಿರ ಮಂದಿ ಭದ್ರತಾ ಸಿಬ್ಬಂದಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದರು.
ಮಧ್ಯಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಕಾಶ್ಮೀರದಲ್ಲಿ ಪೊಲೀಸ್ ಠಾಣೆಗಳು ಹಾಗೂ ಭದ್ರತಾ ನೆಲೆಗಳ ಮೇಲಿನ ದಾಳಿಗಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದೆ ಹಾಗೂ ಸಹಾಯ ಒದಗಿಸಿದೆಯೆಂದು ಸರಕಾರ ಆರೋಪಿಸಿದೆ.
‘ಇನ್ಸಾನಿಯತ್’ ಹಾಗೂ ಜಾಮೂರಿಯತ್’ (ಸ್ವಾತಂತ್ರ) ಗಳನ್ನೊಳಗೊಂಡ ಹಾಗೂ ಮಾನವತೆಯು ಸತ್ತ್ವವಾಗಿರುವ ಕಾಶ್ಮೀರ ನೀತಿಯೊಂದಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪ್ರಸಿದ್ಧ ಬದ್ಧತೆಯನ್ನು ಅವರು ಜಾಗೃತಗೊಳಿಸಿದ್ದಾರೆ.
ನಿನ್ನೆ ಹೊಸದಿಲ್ಲಿಗೆ ತುರ್ತು ಭೇಟಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇಂದ್ರ ಗೃಹ ಸಚಿವರೊಂದಿಗಿನ ಮಾತುಕತೆಯ ವೇಳೆ, ವಾಜಪೇಯಿಯವರ ಕೊಡುಗೆಯನ್ನು ನೆನಪಿಸಿಕೊಳ್ಳುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಪ್ರಧಾನಿಯ ಈ ಹೇಳಿಕೆಯು, ಆಗಾಗ ಕಾಣೆಯಾಗುತ್ತಿರುವ, ಕೇಂದ್ರ ಸರಕಾರ ಹಾಗೂ ಮುಫ್ತಿಯವರ ನಡುವಣ ಅನುರೂಪತೆಯನ್ನು ತೋರಿಸಿದೆ.
ಯುವಕರು ಪುಸ್ತಕ ಹಾಗೂ ಕಂಪ್ಯೂಟರ್‌ಗಳ ಬದಲು ಕಲ್ಲುಗಳನ್ನು ಎತ್ತಿಕೊಳ್ಳುತ್ತಿದ್ದಾರೆನ್ನುವ ಮೂಲಕ ಮೋದಿ ಒಂದು ದೇಶದ ದುರವಸ್ಥೆಯ ಬಗ್ಗೆ ಉಲ್ಲೇಖಿಸಿದ್ದಾರೆ.
ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಹೆಚ್ಚಿನವರು 16-18ರ ಪ್ರಾಯದವರಾಗಿದ್ದಾರೆ. ಅಶಾಂತಿ ಹರಡಿದಾಗೆಲ್ಲ ಭಾರೀ ಗುಂಪುಗಳು ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಿ ಪ್ರತಿದಾಳಿಗೆ ಪ್ರಚೋದನೆ ನೀಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಅಭ್ಯಾಸವಾಗಿದೆ.





