ಬಿಹಾರ ಪೊಲೀಸರಿಗೆ ಭಡ್ತಿಯೆಂದರೆ ಭಯ!
ಪಾಟ್ನಾ, ಆ.9: ಅಪಹರಣ ಹಾಗೂ ಕೊಲೆಗಳ ಉದ್ಧಟ ಸರಣಿಗೆ ಸಾಕ್ಷಿಯಾಗಿರುವ ಹಾಗೂ ಜಂಗಲ್ ರಾಜ್ ಎಂದು ಕರೆಯಲ್ಪಡುತ್ತಿರುವ ಬಿಹಾರದಲ್ಲಿ ಪೊಲೀಸ್ ಅಧಿಕಾರಿಗಳು ಭಡ್ತಿ ಪಡೆಯುವುದಕ್ಕೇ ಹಿಂಜರಿಯುತ್ತಿದ್ದಾರೆ!
ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ಪೊಲೀಸ್ ಠಾಣಾಧಿಕಾರಿಯ ದರ್ಜೆಗೆ ಭಡ್ತಿಯಾಗಿ ಹುದ್ದೆ ಸ್ವೀಕರಿಸಲು ಬರಹ ಮೂಲಕ ನಿರಾಕರಿಸಿದ್ದಾರೆಂದು ಬಿಹಾರ್ ಪೊಲೀಸ್ ಅಸೋಸಿಯೇಷನ್‌ನ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮದ್ಯ ನಿಷೇಧದ ಕುರಿತಾಗಿ ಈಗಾಗಲೇ ಇರುವ ಕಠಿಣ ಕಾನೂನನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಇನ್ನಷ್ಟು ಬಿಗಿಗೊಳಿಸಿರುವುದು ಕಳೆದ ಮೂರು ದಿನಗಳಿಂದ ಇಂತಹ ಪತ್ರಗಳು ಹೆಚ್ಚಳಗೊಳ್ಳಲು ಪ್ರೇರಣೆ ನೀಡಿದೆಯೆನ್ನಲಾಗಿದೆ.
ಪ್ರೌಢನೊಬ್ಬನು ಮದ್ಯಪಾನ ಮಾಡಿದುದು ಪತ್ತೆಯಾದರೆ, ಆತನ ಇಡೀ ಕುಟುಂಬವನ್ನೇ ಶಿಕ್ಷೆಗೊಳಪಡಿಸುವುದು ಹಾಗೂ ಮದ್ಯ ನಿಷೇಧ ಜಾರಿಯಲ್ಲಿ ಲೋಪವೆಸಗುವ ಪೊಲೀಸ್ ಸಿಬ್ಬಂದಿಗೆ ದಂಡ ವಿಧಿಸುವಂತೆ ಈ ತಿಂಗಳಾರಂಭದಲ್ಲಿ ಬಿಹಾರದ ಶಾಸಕರು ತಿದ್ದುಪಡಿಯೊಂದಕ್ಕೆ ಅಂಗೀಕಾರ ನೀಡಿದ್ದಾರೆ. ಅದರ ಫಲಿತಾಂಶವಾಗಿ, ಕಳ್ಳಭಟ್ಟಿ ಉಪಕರಣ ಹಾಗೂ ಪಾತ್ರೆಗಳು ಪತ್ತೆಯಾದ ವ್ಯಾಪ್ತಿಯ ಪೊಲೀಸ್ ಠಾಣೆಗಳ 11 ಮಂದಿ ಎಸ್‌ಎಚ್‌ಒಗಳು ಅಥವಾ ಪ್ರಭಾರ ಅಧಿಕಾರಿಗಳನ್ನು 10 ವರ್ಷಗಳ ಕಾಲಕ್ಕೆ ಅಮಾನತು ಮಾಡಲಾಗಿದೆ.
ಒಳ್ಳೆಯ ಕೆಲಸ ಮಾಡಿದವರಿಗೆ ಬಹುಮಾನ ನೀಡುವ ಬದಲು, ಕ್ಷುಲ್ಲಕ ಕಾರಣಗಳಿಗಾಗಿ ಪೊಲೀಸರಿಗೆ ಶಿಕ್ಷೆ ನೀಡಲಾಗುತ್ತಿದೆಯೆಂದು ಬಿಹಾರ್ ಪೊಲೀಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಮೃತ್ಯುಂಜಯ ಕುಮಾರ್ ಸಿಂಗ್ ಆರೋಪಿಸಿದ್ದಾರೆ.
ಕರ್ತವ್ಯ ನಿರ್ಲಕ್ಷದ ಆರೋಪ ಹೊರಿಸಲಾದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡುವ ಮೊದಲು ಸರಕಾರವು ಹಿರಿಯ ಅಧಿಕಾರಿಗಳಿಂದ ಅವರ ತನಿಖೆಯನ್ನು ನಡೆಸಬೇಕೆಂದು ಸಂಘಟನೆ ಒತ್ತಾಯಿಸಿದೆ.
ಹೊಸ ಮದ್ಯ ನಿಷೇಧ ಕಾಯ್ದೆಯು ಅಬಕಾರಿ ಇಲಾಖೆಗೆ ಎಲ್ಲ ಅಧಿಕಾರ ನೀಡಿದೆ. ಅದರಿಂದಾಗಿ ಮದ್ಯ ನಿಷೇಧ ಸಂಪೂರ್ಣ ಯಶಸ್ವಿಯಾಗಿದೆಯೆಂಬುದನ್ನು ಸಾಬೀತುಪಡಿಸಬೇಕಾದ ಒತ್ತಡವನ್ನು ಅಧಿಕಾರಿಗಳ ಮೇಲೆ ಸತತವಾಗಿ ಹೇರಲಾಗುತ್ತಿದೆಯೆಂದು ಪೊಲೀಸ್ ಅಧಿಕಾರಿಗಳು ದೂರಿದ್ದಾರೆ.





